ಕ್ರಿಕೆಟ್ ಸಾಧಕಿ ಮಿಥಾಲಿರಾಜ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಸಾಧನೆಯ ಪ್ರತಿಯೊಂದು ಮೆಟ್ಟಿಲನ್ನು ಏರುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಪರಮಗುರಿ. ಈ ಗುರಿಯನ್ನಿಟ್ಟುಕೊಂಡೇ ಕೆಲವರು ದಾಖಲೆಗಳ ಒಡೆಯರಾಗಿ ಜಾಗತಿಕ ಕ್ರೀಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ವಿಷಯಕ್ಕೆ ಬಂದಾಗ ಭಾರತದ ಸಚಿನ್ ತೆಂಡೂಲ್ಕರ್ `ವಿಶ್ವ ದಾಖಲೆಗಳ ವೀರ’ನೆನ್ನುವುದನ್ನು ಕ್ರಿಕೆಟ್ ಜಗತ್ತು ಒಪ್ಪಿಕೊಂಡಾಗಿದೆ. ಅಂತಹ ಕ್ರಿಕೆಟ್ ಸಾಧನೆಯನ್ನು ಮಹಿಳಾ ಕ್ರಿಕೆಟಿನಲ್ಲಿ ಮಾಡಿರುವ ಸಾಧಕಿ ಎಂದರೆ ಸದ್ಯ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿರಾಜ್.

ಹೌದು ! ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಿಥಾಲಿರಾಜ್ ಏಕದಿನ ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿ ವಿಶ್ವದಾಖಲೆ ಬರೆದರು. ಬಹುಶಃ ಇಂತಹ ವಿಶ್ವದಾಖಲೆ ಇನ್ನೂ ಬೇರೆ ಆಟಗಾರ್ತಿಯರಿಂದ ಸದ್ಯ ಮುರಿಯಲ್ಪಡುವುದು ಅನುಮಾನ. ಏಕೆಂದರೆ ಒಂದೂವರೆ ದಶಕಗಳ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ತನ್ನ ಮೇರು ಸಾಧನೆಯನ್ನು ತೋರುತ್ತಿರುವ ಮಿಥಾಲಿರಾಜ್ ಭಾರತದ `ಲೇಡಿ ತೆಂಡೂಲ್ಕರ್’ ಎಂದೇ ಕ್ರಿಕೆಟ್ ಜಗತ್ತು ಗುರುತಿಸಿದೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಮಿಥಾಲಿರಾಜ್ ಆಕರ್ಷಕ ಹೊಡೆತಗಳ ಆಟಗಾರ್ತಿ. ಐದು ಬಾರಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿರುವ ಭಾರತದ ಏಕೈಕ ಆಟಗಾರ್ತಿ ಕೂಡ. ತನ್ನ 17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿರುವ ಇವರು ಈಗ ಆರು ಸಾವಿರ ರನ್ನುಗಳ ಗಡಿ ದಾಟಿ ಮಹಿಳಾ ಕ್ರಿಕೆಟ್ ರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಮಹಿಳಾ ಕ್ರಿಕೆಟಿನಲ್ಲಿ ಭಾರತದ ಕಂಪನ್ನು ಜಾಗತಿಕವಾಗಿ ಪಸರಿಸಿರುವ ಮಿಥಾಲಿರಾಜ್ ಪರಿಪೂರ್ಣ ಸವ್ಯಸಾಚಿ. ಭಾರತ ತಂಡದ ಗೆಲುವಿಗಾಗಿ ಈಕೆ ಸಾಕಷ್ಟು ಬಾರಿ ಏಕಾಂಗಿಯಾಗಿ ಹೋರಾಟವನ್ನು ನಡೆಸಿದ್ದಾರೆ. ನಿರಂತರವಾಗಿ ಸ್ಥಿರತೆಯ ಆಟವನ್ನು ಪ್ರದರ್ಶಿಸುತ್ತಿರುವ ಮಿಥಾಲಿರಾಜಗೆ ತನ್ನ ನಾಯಕತ್ವದಲ್ಲಿ ವಿಶ್ವಕಪ್ ಗೆಲ್ಲುವ ಹಂಬಲವಿದೆ.

ಮಿಥಾಲಿರಾಜ್ ಕ್ರಿಕೆಟಿನಲ್ಲಿ ಆಸಕ್ತಿ ಬೆಳೆಸಿಕೊಂಡ ರೀತಿ ರೋಚಕವೆನಿಸುತ್ತಿದೆ. ಅಣ್ಣ ಕ್ರಿಕೆಟ್ ಫ್ರಾಕ್ಟಿಸ್ಟಿಗೆಂದು ಹೋಗುತ್ತಿದ್ದಾಗ ಮಿಥಾಲಿ ಕೂಡಾ ಹೋಗಿ ಕ್ರಿಕೆಟ್ ಆಟವನ್ನು ನೋಡಿ ನೋಡಿ ಕಲಿತವರು. ಶಾಲಾ ದಿನಗಳಲ್ಲಿ ಈಕೆಗೆ ಕ್ರೀಡೆಯ ಮೇಲೆ ಆಸಕ್ತಿ ಇತ್ತು. ಆದರೆ ಕ್ರಿಕೆಟ್ ಆಟಗಾರ್ತಿಯಾಗಬೇಕು ಎಂಬ ಕನಸು ಇರಲಿಲ್ಲ. ಮೊದಲಿಗೆ ಟೇಬಲ್ ಟೆನ್ನಿಸ್ ಹಾಗೂ ಸ್ಕೇಟಿಂಗ್ ಮುಂತಾದ ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಂತರ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ತೋರಿಸಿದರು. ಹತ್ತನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದ ಮಿಥಾಲಿ ವಿದ್ಯಾರ್ಥಿನಿಯಾಗಿದ್ದಾಗಲೇ ಗಮನಾರ್ಹ ಪ್ರದರ್ಶನದ ಮೂಲಕ ಮಿಂಚಿದರು.

ಭರ್ಜರಿ ಎಂಟ್ರಿ

ಮಿಥಾಲಿರಾಜ್ 17ನೇ ವಯಸ್ಸಿನಲ್ಲೇ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿದರು. 1999ರ ಜೂನ್ 26ರಂದು ಕೀನ್ಯಾದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಇವರು ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದರು. ಈ ಪಾದಾರ್ಪಣೆ ಪಂದ್ಯದಲ್ಲೇ ಮಿಥಾಲಿ ಭರ್ಜರಿ ಶತಕ ಬಾರಿಸಿ ಮಿಂಚಿದರು. `ಕ್ರಿಕೆಟ್’ ಪುರುಷರ ಆಟವೆನ್ನುವ ಕಾಲದಲ್ಲಿ ಪುರುಷರಿಗಿಂತ ತಾವು ಏನು ಕಡಿಮೆ ಇಲ್ಲ ಎನ್ನುವುದನ್ನು ಮಿಥಾಲಿರಾಜ್ ತನ್ನ ಚೊಚ್ಚಲ ಪಂದ್ಯದಲ್ಲೇ ತೋರಿಸಿಕೊಟ್ಟರು. ಈ ಪಂದ್ಯದಲ್ಲಿ ಅವರು ಅಜೇಯ 114 ರನ್ ಬಾರಿಸಿ ತನ್ನ ಕ್ರಿಕೆಟ್ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಈ ಒಂದು ಭರ್ಜರಿ ಇನ್ನಿಂಗ್ಸ್ ನಂತರ ಮಿಥಾಲಿರಾಜ್ ಎಂದೂ ಭಾರತ ತಂಡದಿಂದ ಬೇರ್ಪಟ್ಟಿಲ್ಲ. ಗಾಯದ ಸಮಸ್ಯೆಯಿಂದ ಹೊರಗೆ ಉಳಿದಿದ್ದನ್ನು ಬಿಟ್ಟರೆ ಮಿಥಾಲಿ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯಾಗಿ ಈಗಲೂ ಕಾಣಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಫರ್ಪೆಕ್ಟ್ ಆಟಗಾರ್ತಿಯಾಗಿದ್ದ ಇವರು ಇದುವರೆಗೆ 183 ಪಂದ್ಯಗಳಲ್ಲಿ 51.52ರ ಸರಾಸರಿಯಲ್ಲಿ 6028 ರನ್ನುಗಳನ್ನು, 5 ಶತಕ, 49 ಅರ್ಧಶತಕಗಳ ಮೂಲಕ ಸಂಗ್ರಹಿಸಿದ್ದಾರೆ.

ಹಿರಿಯ ಆಟಗಾರ್ತಿಯರ ಮಾರ್ಗದರ್ಶನದಲ್ಲಿ ಪಳಗಿರುವ ಮಿಥಾಲಿರಾಜ್ ಅವರಿಗೆ ಈಗ 35 ವರ್ಷ. ಆದರೂ ಕ್ರಿಕೆಟ್ ನಂಟನ್ನು ಬಿಟ್ಟು ಕೊಡಲು ಅವರಿಗೆ ಇಷ್ಟವಿಲ್ಲ. ಮೊದಲು ಟೆಸ್ಟ್ ಕ್ರಿಕೆಟಿಗೆ `ಬ್ರಾಂಡ್’ ಆಗಿದ್ದ ಇವರು ಕ್ರಮೇಣ ಏಕದಿನ ಕ್ರಿಕೆಟಿಗೂ ಸೈ ಎನಿಸಿಕೊಂಡ ಆಟಗಾರ್ತಿ. ತವರು ನೆಲದಲ್ಲಿ ಆಕರ್ಷಕವಾಗಿ ಆಡುತ್ತಿರುವ ಇವರು ಹಲವು ದಾಖಲೆಗಳಿಗೆ ಭಾಜನರಾಗಿದ್ದಾರೆ. ತವರು ನೆಲದಲ್ಲಿ 2000ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರ್ತಿಗಳ ಪೈಕಿ ಇವರಿಗೆ ಅಗ್ರಸ್ಥಾನ. ಈ ಸಾಧನೆಯ ಮೊದಲ ಒಡತಿ ಕೂಡಾ ಮಿಥಾಲಿರಾಜ್. ಇವರು ಉತ್ತಮ ಆಟಗಾರ್ತಿಯಾಗಿ ಗಮನ ಸೆಳೆದಂತೆ ಪ್ರಬುದ್ಧ ನಾಯಕಿಯಾಗಿಯೂ ಗಮನ ಸೆಳೆದವರು. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಮಹಿಳಾ ಕ್ರಿಕೆಟಿಗೆ ಹೊಸ ಭರವಸೆಯನ್ನು ಇವರು ತುಂಬಿರುವರು.

ಸದ್ಯ ಮಹಿಳಾ ವಿಶ್ವಕಪ್ ಕ್ರಿಕೆಟಿನಲ್ಲಿ ಭಾರತ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುತ್ತಿರುವ ಮಿಥಾಲಿರಾಜ್ ಹಲವಾರು ಪ್ರಶಸ್ತಿಗಳಿಂದಲೂ ಪುರಸ್ಕøತರಾಗಿದ್ದಾರೆ. 2003ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಈಗ ನಡೆಯುತ್ತಿರುವ ಮಹಿಳಾ ವಿಶ್ವಕಪ್ಪಿನಲ್ಲಿ ಭಾರತ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಡುವ ಪಣತೊಟ್ಟಿರುವ ಮಿಥಾಲಿರಾಜ್ ಪ್ರಯತ್ನಕ್ಕೆ ಯಶಸ್ಸi ಲಭಿಸಲು ಎನ್ನುವ ಆಶಯ ಕ್ರಿಕೆಟ್ ಪ್ರೇಮಿಗಳದ್ದು.