ಸಮಾಜಸೇವೆಗೆಂದು ನೀಡಿದ ಅಂಬುಲೆನ್ಸ್ ದುರುಪಯೋಗ ಮಾಡಿದವಗೆ ಸ್ಥಳೀಯರ ತರಾಟೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಾಪುವಿನಲ್ಲಿ ಸಮಾಜಸೇವೆಯ ಸೋಗಿನಲ್ಲಿದ್ದ ಸೂರಿ ಶೆಟ್ಟಿ ಎಂಬವರಿಗೆ ದಾನಿಗಳಿಬ್ಬರು ಸಮಾಜಸೇವೆಗೆ ಸಹಕಾರಿಯಾಗಲೆಂದು ನೀಡಿದ ಅಂಬುಲೆನ್ಸನ್ನು ಆತ ದುರುಪಯೋಗ ಮಾಡುತ್ತಿದ್ದಾನೆ ಎಂಬುದಾಗಿ ಕಾಪು ಅನಿತ್ ಶೆಟ್ಟಿ ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಾ ಕಾಪು ಮಾರಿಗುಡಿ ಸಮೀಪದ ಗರೋಡಿ ಸ್ವಾಗತಗೋಪುರ ಬಳಿ ಬಿದ್ದುಕೊಂಡಿದ್ದು, ಈ ಬಗ್ಗೆ ಸಮಾಜಸೇವಕನ ಸೋಗಿನಲ್ಲಿರುವ ಸೂರಿ ಶೆಟ್ಟಿಯವರಿಗೆ ತಿಳಿಸಲಾಯಿತಾದರೂ ಅವರು ಬಾರದೆ ಕರ್ತವ್ಯ ಮರೆತು ವರ್ತಿಸಿದ್ದಾರೆ. ಆ ಬಳಿಕ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದಾಗ ಅವರು ತಕ್ಷಣವೇ ಸ್ಥಳಕ್ಕೆ ಆಗಮಿಸಿ 108 ಅಂಬುಲೆನ್ಸ್ ಮೂಲಕ ಅನಾರೋಗ್ಯ ಪೀಡಿತರನ್ನು ಸಾಗಿಸಲು ತಯಾರಿ ನಡೆಸುತ್ತಿದಂತೆ ಫೋಟೋಗೆ ಪೋಸ್ ನೀಡಲು ಸ್ಥಳಕ್ಕೆ ಬಂದ ಸೂರಿ ಶೆಟ್ಟಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, “ನೀನು ಸಮಾಜ ಸೇವಕನಲ್ಲ, ಸಮಾಜ ಘಾತುಕ” ಎಂದು ದಬಾಯಿಸಿದ್ದಾರೆ. ಸಮಾಜ ಸೇವೆಗೆ ಉಚಿತವಾಗಿ ಊಪಯೋಗವಾಗುವಂತೆ ದಾನಿಗಳಿಬ್ಬರು ಜಂಟಿಯಾಗಿ ನೀಡಿದ ಅಂಬುಲೆನ್ಸನ್ನು ಸೂರಿ ಶೆಟ್ಟಿ ವ್ಯಾಪಾರ ದೃಷ್ಟಿಯಲ್ಲಿ ಉಪಯೋಗಿಸುತ್ತಿದ್ದು, ಬಡಪಾಯಿ ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬುದಾಗಿ ಅನಿತ್ ಶೆಟ್ಟಿ ಆರೋಪಿಸಿದ್ದಾರೆ.

ಹೆದ್ದಾರಿ ಪಕ್ಕದಲ್ಲಿದ್ದ ಅನಾರೋಗ್ಯ ಪೀಡಿತರನ್ನು ವಿಶು ಶೆಟ್ಟಿ ಸಹಕಾರದಿಂದ ಉಡುಪಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂಬುದಾಗಿ ಅನಿತ್ ಶೆಟ್ಟಿ ತಿಳಿಸಿದ್ದಾರೆ. ಈ ಸಂದರ್ಭ ಕಾಪು ಪುರಸಭೆ ಸದಸ್ಯರು ಸಹಿತ ಸಾರ್ವಜನಿಕರು ಜೊತೆಗಿದ್ದರು.