ಹಿಂದೂಗಳನ್ನು ಮತಾಂತರಿಸಲು ಮಿಷನರಿಗಳಿಗೆ ತಾಕತ್ತಿಲ್ಲ : ಭಾಗ್ವತ್

ನವ್ಸರಿ : ಮತಾಂತರ ವಿವಾದವನ್ನು ಮತ್ತೊಮ್ಮೆ ಕೆದಕಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಶನಿವಾರದಂದು ವನಸ್ಡಾದಲ್ಲಿ ಭಾರತ ಸೇವಾಶ್ರಮ ಸಂಘ ಆಯೋಜಿಸಿದ್ದ  ವಿರಾಟ್ ಹಿಂದೂ ಸಮ್ಮೇಳನದ  ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ಮಿಷನರಿಗಳಿಗೆ `ಶಕ್ತಿಯಿಲ್ಲದೇ ಇರುವುದರಿಂದ’ ದೇಶದಲ್ಲಿ ಮತಾಂತರ ಯತ್ನಗಳು ಯಶಸ್ವಿಯಾಗದು ಎಂದಿದ್ದಾರೆ.

“ಅಮೆರಿಕಾ, ಯುರೋಪಿನಲ್ಲಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಬಳಿಕ ಅವರು (ಮಿಷನರಿಗಳು) ಏಷ್ಯಾದ ಮೇಲೆ ಕಣ್ಣಿಟ್ಟಿದ್ದಾರೆ. ಚೀನಾ ತನ್ನನ್ನು ಜಾತ್ಯತೀತವೆನ್ನುತ್ತಿದೆ, ಆದರೆ ಅದು ಕ್ರೈಸ್ತ ಧರ್ಮ ಒಪ್ಪಿಕೊಳ್ಳಲು ಸಿದ್ಧವಿದೆಯೇ ? ಇಲ್ಲ.  ಮಧ್ಯಪೂರ್ವ ದೇಶಗಳೂ ಇದನ್ನು ಒಪ್ಪುವುದಿಲ್ಲ. ಇದೀಗ ಅವರು ತಮ್ಮ ಕಾರ್ಯ ಸಾಧಿಸಲು ಭಾರತ ಸರಿಯಾದ ಸ್ಥಳ ಎಂದು ತಿಳಿಯುತ್ತಿದ್ದಾರೆ” ಎಂದು ಹೇಳಿದ ಭಾಗ್ವತ್, “ಆದರೆ ಕಳೆದ 300 ವರ್ಷಗಳಿಂದ ಅವರ ಪ್ರಯತ್ನಗಳ ಹೊರತಾಗಿಯೂ ಕೇವಲ ಶೇ 6ರಷ್ಟು ಭಾರತೀಯ ಜನಸಂಖ್ಯೆಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಅವರಿಗೆ ಸಾಧ್ಯವಾಗಿದೆ.  ಅವರಿಗೆ ಶಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ” ಎಂದು ಅಭಿಪ್ರಾಯಪಟ್ಟರು.

ತಮ್ಮ  ಮಾತನ್ನು ಸಮರ್ಥಿಸಲೆಂದು ಭಾಗ್ವತ್ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂ ಹಾಗೂ ಅಮೆರಿಕಾದ ಚರ್ಚುಗಳೆರಡನ್ನು  ಕ್ರಮವಾಗಿ  ವಿಶ್ವ ಹಿಂದು ಪರಿಷದ್ ಕಚೇರಿ ಹಾಗೂ ಗಣೇಶ ದೇವಸ್ಥಾನವಾಗಿ ಅಮೆರಿಕಾದ ಹಿಂದೂ ಉದ್ಯಮಿಯೊಬ್ಬರು ಪರಿವರ್ತಿಸಿರುವುದನ್ನು ಉಲ್ಲೇಖಿಸಿದರು. “ತಮ್ಮದೇ ದೇಶಗಳಲ್ಲಿ ಅವರ (ಮಿಷನರಿಗಳ) ಪರಿಸ್ಥಿತಿ ಹೀಗಿರುವಾಗ ಅವರು ನಮ್ಮನ್ನು ಮತಾಂತರಗೊಳಿಸುವ ಉದ್ದೇಶ ಹೊಂದಿದ್ದಾರೆ. ಅವರಿಗೆ ಹಾಗೆ ಮಾಡಲು ಸಾಧ್ಯವಿಲ್ಲ” ಎಂದರು.