ಕಾಣೆಯಾಗಿದ್ದ ವಿವಾಹಿತೆ ಪ್ರಿಯಕರನ ಜೊತೆ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ವಿವಾಹಿತ ಮಧ್ಯವಯಸ್ಕ ಮಹಿಳೆಯೊಬ್ಬರು ಮಡಿಕೇರಿಯ ನಾಪೋಕ್ಲು ಬಳಿ ಬಾಡಿಗೆ ಮನೆಯಲ್ಲಿ ತನ್ನ ಪ್ರಿಯಕರನ ಜೊತೆ ಪತ್ತೆಯಾಗಿದ್ದು, ಆಕೆಯ ನಾಪತ್ತೆಯಾದ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ.

ಎರಡು ವರ್ಷದ ಹಿಂದೆ ಮನೆಯಿಂದ ಗಾರ್ಬಲ್ ಕೆಲಸಕ್ಕೆಂದು ತೆರಳಿದ್ದ ಒಳಮೊಗ್ರು ಗ್ರಾಮದ ಕಡ್ತಿಮಾರ್ ನಿವಾಸಿ ಉಮಾವತಿ (45) ಎಂಬವರು ದಿಢೀರನೆ ನಾಪತ್ತೆಯಾಗಿದ್ದರು. ಗಂಡ ಹಾಗೂ ಮೂವರು ಮಕ್ಕಳ ಸಂಸಾರವನ್ನು ಹೊಂದಿದ್ದ ಅವರು ಎಲ್ಲಿಗೆ ತೆರಳಿರಬಹುದು ಎಂಬ ಬಗ್ಗೆ ನಾನಾ ಸಂಶಯಗಳು ಹುಟ್ಟಿಕೊಂಡಿದ್ದವು. ಈ ನಡುವೆ ಮಹಿಳೆಯನ್ನು ಕೊಲೆ ಮಾಡಿದ್ದಾರೆ ಅಥವಾ ಮರಾಟ ಮಾಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿತ್ತು.

ಇದೀಗ ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆ ನಾಪೋಕ್ಲು ಬಾಡಿಗೆ ಮನೆಯಲ್ಲಿ ತನ್ನ ಪ್ರಿಯಕರ ಕೃಷ್ಣ ಪೂಜಾರಿ ಎಂಬವರ ಜೊತೆ ವಾಸವಾಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿ ಮಹಿಳೆಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯ ಜೊತೆ ಇದ್ದ ಆಕೆಯ ಪ್ರಿಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳದೆ ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಸಂಪ್ಯ ಠಾಣಾ ಎಸ್ ಐ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಈ ಹಿಂದೆ ಠಾಣೆಯಲ್ಲಿ ಎಸ್ ಐ ಆಗಿದ್ದ ರವಿ ಬಿ ಎಸ್ ಮಹಿಳೆ ಜೀವಂತವಾಗಿಲ್ಲ ಇದ್ದರೆ ನಾವು ಹುಡುಕಾಡುವ ವೇಳೆ ಸಿಗುತ್ತಿದ್ದರು ಎಂದು ಮನೆಯವರಲ್ಲಿ ತಿಳಿಸಿದ್ದರು. ಇದರಿಂದ ಕುಟುಂಬ ನೋವಿನಿಂದ ಸಿಕ್ಕ ಸಿಕ್ಕ ದೇವರಲ್ಲಿ ಹರಕೆಯನ್ನೂ ಹೇಳಿತ್ತು. ಆದರೆ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಯಾವುದೇ ಕೇಸನ್ನು ಪತ್ತೆ ಮಾಡಲು ಸಾಧ್ಯ ಎಂಬುದು ಸಾಬೀತಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ.