ನಾಪತ್ತೆಯಾಗಿದ್ದ ವಿದ್ಯಾರ್ಥಿ ಪುನಃ ಪಾಲಕರ ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಮೇ 19ರಂದು ಮನೆಪಾಠಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಕಾಲೇಜು ವಿದ್ಯಾರ್ಥಿಯೊಬ್ಬ ಮನೆಗೆ ವಾಪಸ್ ಆಗದೇ ನಾಪತ್ತೆಯಾದ ಘಟನೆ ನಡೆದಿತ್ತು. ಈಗ ಪೊಲೀಸರ ಕಾರ್ಯಾಚರಣೆಯಲ್ಲಿ ಆತನನ್ನು ಗೋವಾದಲ್ಲಿ ಪತ್ತೆ ಹಚ್ಚಿ ಪಾಲಕರಿಗೆ ಒಪ್ಪಿಸಿದ್ದಾರೆ.

ಬಾಸಗೋಡ ಗ್ರಾಮದ ವೈಭವ ಲಕ್ಷ್ಮೀಧರ ನಾಯಕ ಎಂಬಾತನೇ ನಾಪತ್ತೆಯಾದವ. ವ್ಯಾಸಂಗದಲ್ಲಿ ಹಿನ್ನಡೆಯಾಗಿದ್ದರಿಂದ ಮನೆಯವರ ಬುದ್ಧಿಮಾತನ್ನು ಗಂಭೀರವಾಗಿ ಪರಿಗಣಿಸಿದ ಈತನು ಊರನ್ನೇ ಬಿಟ್ಟು ನಾಪತ್ತೆಯಾಗಿದ್ದ. ಈತನ ಹುಡಕಾಟ ನಡೆಸಿದರೂ ಪತ್ತೆಯಾಗದೇ ಇರುವುದರಿಂದ ಮೇ 20ರಂದು ತಂದೆ ಲಕ್ಷ್ಮೀಧರ ನಾಯಕ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಸಹ ಆತನ ಮೊಬೈಲ್ ನಂಬರ್ ಪಡೆದು ಎಷ್ಟೇ ಹುಡುಕಾಟ ನಡೆಸಿದರೂ ಈತನ ಸುಳಿವು ಲಭ್ಯವಾಗಿಲ್ಲ.

ಪತ್ತೆಯಾದದ್ದು ಹೇಗೆ ? ಇತ್ತೀಚಿಗಷ್ಟೇ ವೈಭವ ನಾಯಕ ಪೇಸ್ಬುಕ್ಕಿನಲ್ಲಿ ಕಾಣಿಸಿಕೊಂಡಿದ್ದ. ಇದು ಪಾಲಕರಿಗೆ ಸಂತೋಷದ ಕ್ಷಣವಾಗಿತ್ತು. ಈತ ಗೋವಾದ ಪಣಜಿ ಸಮೀಪದ ಮಾಪ್ಸ್ ಬೀಚಿನ ರೆಸಾರ್ಟೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಕಲೆ ಹಾಕಿ ವೈಭವನನ್ನು ತಮ್ಮ ವಶಕ್ಕೆ ಪಡೆದ ನಂತರ ಮನೆಯವರಿಗೆ ಒಪ್ಪಿಸಿದರು.

 

LEAVE A REPLY