ಬೆದರಿಕೆಯಿಂದ ಊರು ಬಿಟ್ಟಿದ್ದ ದಲಿತ ಯುವತಿ ಪತ್ತೆ ಹಚ್ಚಿ ಹೆತ್ತವರಿಗೆ ಒಪ್ಪಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಮುಸ್ಲಿಮರಲ್ಲಿ ಮಾತನಾಡಿದ್ದಕ್ಕೆ ಆಕ್ಷೇಪಿಸಿದ್ದರು ಎಂಬ ಕಾರಣಕ್ಕೆ ಮನೆ ಬಿಟ್ಟು ನಾಪತ್ತೆಯಾಗಿದ್ದ ತಾಲೂಕಿನ ಮೇರಮಜಲು ಸಮೀಪದ ಅಬ್ಬೆಟ್ಟು ನಿವಾಸಿ ದಲಿತ ಯುವತಿಯನ್ನು ಗುರುವಾರ ಪೊಲೀಸರು ಪತ್ತೆ ಹಚ್ಚಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ಇಲ್ಲಿನ ನಿವಾಸಿ ದಲಿತ ಮಹಿಳೆಯ ಮನೆಗೆ ಬಲಪಂಥೀಯ ಸಂಘಟನೆಗೆ ಸೇರಿದವರು ಎನ್ನಲಾದ ತಂಡವೊಂದು ಕಳೆದ ಭಾನುವಾರ ರಾತ್ರಿ ನುಗ್ಗಿ ಮಹಿಳೆ ಸಹಿತ ಆಕೆಯ ಪುತ್ರಿಗೆ ಮುಸ್ಲಿಮರೊಂದಿಗೆ ಮಾತನಾಡಬಾರದು, ಗ್ರಾಮದಿಂದಲೇ ಹೊರ ಹಾಕಲಾಗುವುದು ಎಂದೆಲ್ಲಾ ಎಚ್ಚರಿಸಿ ಬೆದರಿಕೆ ಒಡ್ಡಿತ್ತು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದರು. ಆರೋಪಿಗಳ ಬೆದರಿಕೆಯ ಬಳಿಕ ಮಾನಸಿಕವಾಗಿ ನೊಂದುಕೊಂಡ ಯುವತಿ ಮನೆ ಬಿಟ್ಟು ಹೇಳದೆ ಕೇಳದೆ ತೆರಳಿದ್ದಳು. ಈ ಬಗ್ಗೆ ಯುವತಿ ನಾಪತ್ತೆ ಬಗ್ಗೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಯುವತಿಯ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯನ್ನು ಆಕೆಯ ಸಂಬಂಧಿಕರ ಮನೆಯಿಂದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

 

LEAVE A REPLY