ಮಂಗಳೂರಿನ ಶ್ರೀನಿಧಿ ರಮೇಶ್ ಶೆಟ್ಟಿಗೆ `ಮಿಸ್ ಸುಪ್ರಾನ್ಯಾಷನಲ್’ ಕಿರೀಟ

ಶ್ರೀನಿಧಿ ರಮೇಶ್ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿಯ ಹೆಮ್ಮೆಯ ಕುವರಿ, ಮಂಗಳೂರು ಮೂಲದ ಶ್ರೀನಿಧಿ ರಮೇಶ್ ಶೆಟ್ಟಿ 2016ನೇ ಸಾಲಿನ ಮಿಸ್ ಸುಪ್ರಾನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪೋಲೇಂಡಿನ ಕ್ರಿನ್ಸಾ ಡ್ರೋಝ್ ನಗರದಲ್ಲಿ ನಡೆದ ಅದ್ದೂರಿ, ವರ್ಣರಂಜಿತ ಸಮಾರಂಭದಲ್ಲಿ ಈ ಕರಾವಳಿಯ ಕುವರಿಗೆ ಕಿರೀಟ ತೊಡಿಸುವ ಮೂಲಕ ಭಾರತೀಯರು ಈಕೆಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

2014ರಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದ ಮಂಗಳೂರು ಮೂಲದ ಇನ್ನೊಬ್ಬ ಚೆಲುವೆ ಆಶಾ ಭಟ್ ಬಳಿಕ ಪ್ರಶಸ್ತಿ ಪಡೆದ ಭಾರತೀಯ ಚೆಲುವೆ ಶ್ರೀನಿಧಿ ಆಗಿದ್ದಾರೆ. ಕಳೆದ ವರ್ಷದ ಮಿಸ್ ಸುಪ್ರಾನ್ಯಾಷನಲ್ ವಿಜೇತಳಾಗಿದ್ದ ಪೆರುಗ್ವೆಯ ಸ್ಟೀಫಾನಾ ಸ್ಟಿಗ್ಮನÀರಿಂದ ಶ್ರೀನಿಧಿಗೆ ಕಿರೀಟಧಾರಣೆ ಮಾಡಲಾಯಿತು.

ಶ್ರೀನಿಧಿ ಅವರು ವೆನಿಜ್ವೇಲದ ವಲೇರಿಯಾ ಅಲ್ಜೇಂದ್ರ ವೆಸ್ಪೋಲಿ ಫಿಗ್ಯುರಾ ಅವರನ್ನು ಸೋಲಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಸ್ಪರ್ಧೆಯಲ್ಲಿ ಒಟ್ಟು 70 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಮುಲ್ಕಿ ನಿವಾಸಿ ರಮೇಶ್ ಮತ್ತು ಕುಶಾಲ ದಂಪತಿ ಪುತ್ರಿ 24ರ ಹರೆಯದ ಶ್ರೀನಿಧಿ ಶೆಟ್ಟಿ ಮುಂಬೈಯಲ್ಲಿ ವಾಸ ಮಾಡಿಕೊಂಡಿದ್ದರು. ಮುಲ್ಕಿ ನಾರಾಯಣ ಗುರು ಶಾಲೆ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನು ಮುಗಿಸಿದ್ದರು. ಬಳಿಕ ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ಬಳಿಕ ಮುಂಬೈಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ಈ ಚೆಲುವೆ ಈ ಹಿಂದೆ ಮಿಸ್ ಕರ್ನಾಟಕ ಹಾಗೂ ಮಿಸ್ ಸೌತ್ ಇಂಡಿಯಾ ಚೆಲುವೆಯಾಗಿ ಪ್ರಶಸ್ತಿ ಪಡೆದುಕೊಂಡಿದ್ದರು. ಹಲವು ಫ್ಯಾಶನ್ ಶೋಗಳಲ್ಲಿ ಈಕೆ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಕೂಡಾ ಮಾಡಿದ್ದಾರೆ. ನೃತ್ಯ, ಟ್ರಕ್ಕಿಂಗ್, ಈಜು ಈಕೆಯ ಹವ್ಯಾಸವಾಗಿದೆ.