ಪಾವಂಜೆ ಬಳಿ ಭೀಕರ ಅಪಘಾತ : ಇಬ್ಬರು ಗಂಭೀರ

ಕರಾವಳಿ ಅಲೆ  ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಲ್ಕಿ ಸಮೀಪದ ಕಾರ್ನಾಡು ನಿವಾಸಿ ಶಾಕಿರ್ ಹಾಗೂ ಕೆರೆಕಾಡು ನಿವಾಸಿ ಸಚಿನ್ ಶೆಟ್ಟಿಗಾರ್ ಗಾಯಗೊಂಡವರು. ಗಾಯಾಳು ಶಾಕಿರ್ ಮುಲ್ಕಿಯಲ್ಲಿ ಎಸಿ ಮೆಕ್ಯಾನಿಕ್ ಅಂಗಡಿ ಹೊಂದಿದ್ದಾನೆ. ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದಾಗ ಪಾವಂಜೆ ಸೇತುವೆ ಬಳಿ ಕಾರಿನ

ಟಯರ್ ಸ್ಫೋಟಗೊಂಡಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಮಂಗಳೂರು ಕಡೆಗೆ ಹೋಗುತ್ತಿದ್ದ ತಡೆರಹಿತ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಬಸ್ಸಿನ ಒಳಗೆ ಹೊಕ್ಕಿದ್ದು ಕಾರಿನಲ್ಲಿದ್ದ ಶಾಕಿರ್ ಹಾಗೂ ಸಚಿನ್ ಬಸ್ಸಿನ ಅಡಿಯಲ್ಲಿ ಸಿಲುಕಿದ್ದು ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಶ್ರಮಪಡಬೇಕಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಗಾಯಾಳುವನ್ನು ಪೋಲೀಸ್ ವ್ಯಾನಿನಲ್ಲಿ ಹಾಕಿ ಆಸ್ಪತ್ರೆಗೆ ದಾಖಲಿಸಿದರು. ಅಪಘಾತದಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಸ್ಥಳೀಯರು ಮತ್ತು ಸುರತ್ಕಲ್ ಟ್ರಾಫಿಕ್ ಪೊಲೀಸರು ಅಪಘಾತಗೊಂಡ ವಾಹನ ತೆರವುಗೊಳಿಸಿದ್ದಾರೆ.

“ಗಂಭೀರ ಗಾಯಗೊಂಡ ಶಾಕಿರ್ ಕಾರ್ನಾಡು ನಾರಾಯಣಗುರು ರಸ್ತೆ ಬಳಿಯ ನಿವಾಸಿಯಾಗಿದ್ದು, ತಂದೆ ಮೀತೆ ಮಹಮ್ಮದ್ ಕಳೆದ 4 ವರ್ಷದ ಹಿಂದೆ ಹಳೆಯಂಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದರು. ವಿದೇಶದಲ್ಲಿ 8 ವರ್ಷ ಇದ್ದುಕೊಂಡು ತಂದೆ ತೀರಿಕೊಂಡ ಮೇಲೆ ಮುಲ್ಕಿಯಲ್ಲಿ ಎಸಿ ಮೆಕ್ಯಾನಿಕ್ ಅಂಗಡಿ ಹಾಕಿಕೊಂಡಿದ್ದಾರೆ” ಎಂದು ಮುಲ್ಕಿ ನಗರ ಪಂಚಾಯತ ಸದಸ್ಯ ಪುತ್ತು ಬಾವ ತಿಳಿಸಿದ್ದಾರೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿನ್ ಶೆಟ್ಟಿಗಾರ್, ಕೆರೆಕಾಡು ಬಳಿಯ ಟೈಲರ್ ಪ್ರಭಾಕರ ಶೆಟ್ಟಿಗಾರ್ ಎಂಬವರ ಮಗನಾಗಿದ್ದು ಬೆಂಗಳೂರಿನಲ್ಲಿ ಐಟಿಐ ಕಲಿತು ಶಾಕಿರ್ ಜೊತೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಇಬ್ಬರ ಎದೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಂತಾಜನಕ ಪರೀಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಸುರತ್ಕಲ್ ಟ್ರಾಫಿಕ್ ಪೋಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ

LEAVE A REPLY