ಮಂಗಳೂರು ಏರ್ಪೋರ್ಟಿನಲ್ಲಿ ತಪ್ಪಿದ ದುರಂತ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಇಳಿಯುತ್ತಿದ್ದ ಸಂದರ್ಭದಲ್ಲಿ ರನ್ವೇಯಲ್ಲಿ ಅಳವಡಿಸಿದ್ದ ಮಾರ್ಗದರ್ಶಿ ದೀಪಕ್ಕೆ ಡಿಕ್ಕಿ ಹೊಡೆದಿದೆ.

ಭಾನುವಾರ ಮುಂಜಾನೆ ನಡೆದ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಏರ್ ಇಂಡಿಯಾ ವಿಮಾನದಲ್ಲಿದ್ದ ಎಲ್ಲಾ 186 ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಏರ್ ಇಂಡಿಯಾ 814 ವಿಮಾನ ನಸುಕಿನ ಜಾವ ದುಬೈನಿಂದ ಮಂಗಳೂರು ಏರ್ಪೋರ್ಟಿಗೆ ಆಗಮಿಸಿತ್ತು. ಲ್ಯಾಂಡ್ ಆಗುವ ವೇಳೆಗೆ ವಿಮಾನದ ರೆಕ್ಕೆ ವಿಮಾನ ಇಳಿಯಲು ನಿರ್ದೇಶನ ನೀಡುವ ಸಿಗ್ನಲ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಪ್ರಯಾಣಿಕರು ಒಂದು ಕ್ಷಣ ಆತಂಕಗೊಂಡಿದ್ದು, ಬಳಿಕ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ.

ಆದರೆ ವಿಮಾನ ನಿಲ್ದಾಣದ ಅಧಿಕೃತರಿಗೆ ಇಂಥಾದ್ದೊಂದು ಘಟನೆ ನಡೆದಿರುವುದು ಬಳಿಕ ತಿಳಿದು ಬಂದಿದೆ. ಗೈಡಿಂಗ್ ದೀಪಕ್ಕೆ ಹಾನಿ ಉಂಟಾಗಿದೆ. ಹೊಸ ದೀಪವನ್ನೂ ಅಳವಡಿಸಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಡಿಕ್ಕಿ ಹೊಡೆದ ಬಗ್ಗೆ ಏರ್ ಇಂಡಿಯಾ ಸುರಕ್ಷತಾ ವಿಭಾಗ ಪ್ರಾಥಮಿಕ ತನಿಖೆ ಆರಂಭಿಸಿದೆ. ಮೇಲ್ನೋಟಕ್ಕೆ ಇಂತಹ ಘಟನೆ ನಡೆದಿರುವುದು ದೃಢಪಟ್ಟಿಲ್ಲ ಎಂದೂ ಹೇಳಲಾಗುತ್ತಿದೆ. ವಿಮಾನಯಾನ ನಿರ್ದೇಶನಾಲಯವು ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.