ಕೊಲ್ಲೂರುಪದವು ಬಳಿ ಗುಡ್ಡೆಗೆ ಬೆಂಕಿ ಹಾಕಿದ ದುಷ್ಕರ್ಮಿಗಳು

ಬೆಂಕಿ ಆರಿಸುತ್ತಿರುವ ಸ್ಥಳೀಯರು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಬಳಕುಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲೂರುಪದವು ಬಳಿ ಎಕರೆಗಟ್ಟಲೆ ಗುಡ್ಡೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ ಘಟನೆ ಗುರುವಾರ ನಡೆದಿದೆ. ಕೊಲ್ಲೂರು ಪದವು ಬಳಿ ಬಹುಗ್ರಾಮ ನೀರಿನ ಯೋಜನೆಯ ಟ್ಯಾಂಕ್ ಬಳಿ ಇರುವ ಎಕರೆಗಟ್ಟಲೆ ಗುಡ್ಡೆಗೆ ಬೈಕಿನಲ್ಲಿ ಬಂದ ಇಬ್ಬರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕೂಡಲೇ ಬೆಂಕಿ ಧಗದಗನೆ ಉರಿಯಲಾರಂಭಿಸಿ ವಿಶಾಲ ಜಾಗದ ಮರಮಟ್ಟುಗಳು ಭಸ್ಮವಾಗಿದೆ. ಸ್ಥಳದಲ್ಲಿ ವಿರಳ ಮನೆಯಿದ್ದ ಕಾರಣ ಭಾರೀ ಆನಾಹುತ ತಪ್ಪಿದೆ. ಕೂಡಲೇ ಸ್ಥಳೀಯರು ತಮ್ಮ ಮನೆಯಿಂದ ನೀರು ತಂದು ಆದಷ್ಟು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಗಾಳಿಗೆ ಬೆಂಕಿ ಮತ್ತಷ್ಟು ಹರಡಿ ಆತಂಕ ಸೃಷ್ಟಿಸಿತ್ತು. ಕೂಡಲೇ ಸ್ಥಳೀಯರು ಮಂಗಳೂರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸಂಜೆ ಹೊತ್ತು ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಅಗ್ನಿಶಾಮಕ ದಳದವರಿಗೆ ಸ್ಥಳೀಯರು ದೂರವಾಣಿ ಮುಖೇನ ತಿಳಿಸಿದ್ದರೂ ಬರುವಾಗ ಸಂಜೆಯಾದ ಕಾರಣ ಕತ್ತಲೆಯಲ್ಲಿ ಬೆಂಕಿ ನಂದಿಸಲು ತ್ರಾಸಪಡಬೇಕಾಯಿತು. ಕಳೆದ ಹಲವಾರು ವರ್ಷಗಳಿಂದ ಕೊಲ್ಲೂರು ಪದವು ನಿವಾಸಿಗಳು ರಸ್ತೆಗೆ ದಾರಿದೀಪ ಅಳವಡಿಸಲು ಬಳಕುಂಜೆ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಅನುಷ್ಟಾನಕ್ಕೆ ಬಂದಿಲ್ಲ ಎಂದು ಪಂಚಾಯತಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲ್ಲೂರುಪದವಿನಿಂದ ಗುಡ್ಡೆಯಂಗಡಿ ಬಳಿಯವರೆಗೆ ದಾರಿದೀಪದ ಅವ್ಯವಸ್ಥೆ ಇದೆ. ಈ ಪರಿಸರದಲ್ಲಿ ಕಳೆದ ವರ್ಷ ಕೂಡ ಚಿರತೆ ಹಾವಳಿ ಹಾಗೂ ದುಷ್ಕರ್ಮಿಗಳಿಂದ ಗುಡ್ಡೆಗೆ ಬೆಂಕಿ ಹಚ್ಚುವಿಕೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪರಿಸರದಲ್ಲಿ ಕುಡಿಯುವ ನೀರಿನ ತತ್ವಾರವಿದ್ದರೂ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.