ಶಿರ್ವ ಚರ್ಚ್ ವಿಗ್ರಹ ಧ್ವಂಸ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಯಾರೋ ಕಿಡಿಗೇಡಿಗಳು ಹಗಲು ಹೊತ್ತಲ್ಲೇ ಶಿರ್ವ ಚರ್ಚಿನ ಹೊರ ಭಾಗದಲ್ಲಿದ್ದ ಒಂದು ವಿಗ್ರಹ ಪುಡಿಗೈದರೆ ಮತ್ತೊಂದನ್ನು ಜಗುಲಿಯ ಮೂಲೆಯಲ್ಲಿ ಇಟ್ಟು ಪರಾರಿಯಾದ ಘಟನೆ ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.

ಸಂತ ಅಂತೋಣಿ ಮೂರ್ತಿಯನ್ನು ಪುಡಿಗೈದರೆ, ಸಂತ ಲಾರೆನ್ಸ್ ಮೂರ್ತಿಯನ್ನು ಪಕ್ಕಕಿಟ್ಟು ತೆರಳಿದ್ದಾರೆ. ಈ ವಿಚಾರ ಚರ್ಚಿನಲ್ಲಿ ಸಂಜೆ ನಡೆಯಲಿದ್ದ ಸಭೆಗೆ ಆಗಮಿಸಿದಾಗ ಬೆಳಕಿಗೆ ಬಂದಿದೆ.  ಈ ವಿಚಾರ ಸಮಾಜ ಬಾಂಧವರ ಗಮನಕ್ಕೆ ಬರುತ್ತಿದಂತೆ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಸುಮಾರು ಐನೂರು ಮಂದಿ ಚರ್ಚಿನ ಮುಂಭಾಗದಲ್ಲಿ ಕುಳಿತು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು.

ಪ್ರತಿಭಟನಾಗಾರರು ಹೇಳುವಂತೆ “ಈ ಘಟನೆಯ ವಿಚಾರ ತಿಳಿದ ತಕ್ಷಣ ಚರ್ಚಿನ ಆಡಳಿತ ಮಂಡಳಿ ಇದನ್ನು ಮುಚ್ಚಿ ಹಾಕುವುದಕ್ಕೆ ಮುಂದಾಗಿದೆ. ಈ ನಿರ್ಲಕ್ಷ್ಯದಿಂದಲೇ ಈ ಪ್ರಕರಣದ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಮೂರು ತಿಂಗಳ ಹಿಂದೆಯೇ ಈ ಚರ್ಚಿನ ಪ್ರಮುಖಭಾಗದಲ್ಲಿರುವ ಐದಕ್ಕೂ ಅಧಿಕ ಸೀಸಿ ಕ್ಯಾಮರಾಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಇದರ ನಿರ್ವಹಣೆ ಮಾಡಬೇಕಾಗಿದ್ದ ಆಡಳಿತ ಮಂಡಳಿ ಕರ್ತವ್ಯ ಮರೆತು ಅಧಿಕಾರಕಂಟಿಕೊಂಡಿದೆ” ಎಂಬುದಾಗಿ ಚರ್ಚಿನ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ಶ್ವಾನ ಚರ್ಚಿನ ಹಿಂದಿನ ಗೇಟಿನ ಬಳಿಯ ವರಗೆ ಹೋಗಿ ಮರಳಿ ಚರ್ಚಿನ ಆವರಣದಲ್ಲೇ ಸುತ್ತಾಡಿದೆ. ಸ್ಥಳಕ್ಕೆ ಆಗಮಿಸಿದ ರಾಜಕೀಯ ಧುರೀಣರು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಗೃಹಮಂತ್ರಿಯೊಂದಿಗೂ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಾಗಿದೆ ಎಂದರು.

ಪ್ರತಿಭಟನಾಗಾರರ ಪರವಾಗಿ ಮಾತನಾಡಿದ ಡೇವಿಡ್ ಡಿಸೋಜ, ನಡೆದ ಘಟನೆಯ ಬಗ್ಗೆ ಚರ್ಚಿಸಿ ನಿರ್ಧಾರ ಗೈಗೊಳ್ಳುವ ಹಿನ್ನಲೆಯಲ್ಲಿ ಸೋಮವಾರ ಮುಂಜಾನೆ 9 ಗಂಟೆಗೆ ಗ್ರಾಮಸ್ಥರ ಸಭೆ ಕರೆಯಲಾಗಿದ್ದು ಅಲ್ಲಿ ಚರ್ಚಿಸಿ ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗುವುದೆಂದರು.