ಅಣೆಕಟ್ಟಿನ ಹಲಗೆ ಮುರಿದು ನೀರು ಸಮುದ್ರಪಾಲು

ಹಾನಿಗೊಂಡ ಅಣೆಕಟ್ಟು

ಕಿಡಿಗೇಡಿಗಳ ಕೃತ್ಯ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಪಂಚಾಯತ್ 9ನೇ ವಾರ್ಡ್ ಬಡಾಜೆಯಲ್ಲಿ ಬಂಗ್ರಮಂಜೇಶ್ವರ ಹೊಳೆಗೆ ಕಟ್ಟಲಾಗಿದ್ದ ಅಣೆಕಟ್ಟಿನ ಹಲಗೆಯನ್ನು ಕಿಡಿಗೇಡಿಗಳು ಮುರಿದು ನಾಶಪಡಿಸಿದ ಘಟನೆ ಸಂಭವಿಸಿದೆ. ಇದರಿಂದಾಗಿ ಇಲ್ಲಿ ಸಂಗ್ರಹಗೊಂಡಿದ್ದ ನೀರೆಲ್ಲ ಹರಿದು ಹೋಗಿ ಅಣೆಕಟ್ಟು ಖಾಲಿಯಾಗಿದೆ.

ಆರು ವರ್ಷದ ಹಿಂದೆ ಈ ಪ್ರದೇಶದ ಕೃಷಿಕರ ಅನುಕೂಲಕ್ಕಾಗಿ ಜಲಪ್ರಾಧಿಕಾರ ಇಲಾಖೆ ಊರವರ ಸಹಕಾರದೊಂದಿಗೆ ಕಟ್ಟಿದ ಅಣೆಕಟ್ಟು ಇದಾಗಿದ್ದು, ಇದರಲ್ಲಿ ಸುಮಾರು ಹತ್ತು ಅಡಿ ನೀರು ಸಂಗ್ರಹಗೊಂಡಿತ್ತು. ಸುಮಾರು 20 ಎಕ್ರೆ ಸ್ಥಳದಲ್ಲಿರುವ ಭತ್ತ, ಅಡಿಕೆ ಮೊದಲಾದ ಕೃಷಿಗೆ ಇದರಿಂದ ಕೃಷಿಕರು ನೀರು ಉಪಯೋಗಿಸುತ್ತಿದ್ದರು. ಆದರೆ ಇಂದು ಬೆಳಿಗ್ಗೆ ನೋಡಿದಾಗ ಅಣೆಕಟ್ಟಿನ ಹಲಗೆಯನ್ನು ಮುರಿದು ಪಕ್ಕದಲ್ಲೇ ಬಿಸಾಡಲಾಗಿದೆ. ಇದರಿಂದಾಗಿ ನೀರೆಲ್ಲ ಸೋರಿ ಹೋಗಿದೆ.

ಕೃಷಿಗೆ ನೀರುಣಿಸಬೇಕಾದ ಈ ಕಾಲದಲ್ಲಿ ಸಂಗ್ರಹಗೊಂಡ ನೀರನ್ನು ಹರಿಬಿಟ್ಟು ಕಿಡಿಗೇಡಿಗಳು ಕೃಷಿಕರ ಬದುಕಲ್ಲಿ ಆಟ ಆಡುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಪಂಚಾಯತ್ ಮಾಜಿ ಸದಸ್ಯ ಯಾದವ ಬಡಾಜೆ ಭೇಟಿ ನೀಡಿ ಪರಿಶೀಲಿಸಿದರು. ಕಿಡಿಗೇಡಿಗಳ ಕೃತ್ಯವನ್ನು ಅವರು ಖಂಡಿಸಿದ್ದು ಬ್ಲಾಕ್ ಪಂ ಹಾಗೂ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.