ಇಂದು 5ನೇ ವಾರ್ಷಿಕೋತ್ಸವ ಆಚರಿಸಲಿರುವ ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ

ನಮ್ಮ ಪ್ರತಿನಿಧಿ ವರದಿ

 ಮಂಗಳೂರು : ನಗರದ ಪಂಪ್ವೆಲ್ಲಿನಲ್ಲಿರುವ ಸೂಪರ್ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆ – ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಇಂದು ಐದನೇ ವಾರ್ಷಿಕೋತ್ಸವ ಆಚರಿಸಲಿದೆ. ಇಲ್ಲಿಯತನಕ 18,000ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಹೆಗ್ಗಳಿಕೆಯಿರುವ ಈ ಆಸ್ಪತ್ರೆ ರಾಜ್ಯದಲ್ಲಿನ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾಗಿದೆ.

ಕಳೆದ ವರ್ಷ ಈ ಆಸ್ಪತ್ರೆ ಸರಾಸರಿ 3,500 ರೋಗಿಗಳಿಗೆ ಚಿಕಿತ್ಸೆಯೊದಗಿಸಿದ್ದು ಅತ್ಯುತ್ತಮ ಗುಣಮಟ್ಟದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇಲ್ಲಿದೆ. ನುರಿತ ವೈದ್ಯರು ಹಾಗೂ ಶ್ರದ್ಧೆಯಿಂದ ಕಾರ್ಯಾಚರಿಸುವ ಸಿಬ್ಬಂದಿಗಳು ಈ ಆಸ್ಪತ್ರೆಯ ಆಧಾರಸ್ಥಂಭವಾಗಿದ್ದಾರೆ.

ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಪೂರಕವಾಗಬಲ್ಲ ಅನೇಕ ಸೌಲಭ್ಯಗಳಿದ್ದು ಅತ್ಯಾಧುನಿಕ ಪೆಟ್-ಸೀಟಿ  ಸ್ಕ್ಯಾನ್ ಸೌಲಭ್ಯ ಕೂಡ ಇಲ್ಲಿದೆ.   ಇದು ನಾನ್-ಇನ್ವೇಸಿವ್ ಇಮೇಜಿಂಗ್ ಒದಗಿಸುವುದಲ್ಲದೆ ಕ್ಯಾನ್ಸರ್ ಗಡ್ಡೆಯ ನಿಖರ ಸ್ಥಾನ ಹಾಗೂ ಅದು ಯಾವ ಹಂತದಲ್ಲಿದೆಯೆಂದು ಹೇಳಬಲ್ಲದು.

ನುರಿತ ರೇಡಿಯಾಲಜಿಸ್ಟ್, ಪ್ಯಾಥಾಲಜಿಸ್ಟ್ ಹಾಗೂ ಬಯೋಕೆಮಿಸ್ಟುಗಳೂ ಈ ಆಸ್ಪತ್ರೆಯಲ್ಲಿದ್ದು  ಶಸ್ತ್ರಕ್ರಿಯೆ, ಕೆಮೋಥೆರಪಿ ಹಾಗೂ ರೇಡಿಯೇಷನ್ ಥೆರಪಿ ಸೌಲಭ್ಯಗಳು ಇಲ್ಲಿವೆ. ಗರ್ಭಕೋಶದ ಕತ್ತಿನ ಕ್ಯಾನ್ಸರ್ ಹಾಗೂ ಬಾಯಿಯ ಕ್ಯಾನ್ಸರ್ ರೋಗಿಗಳಿಗೆ ಇಲ್ಲಿ ಬ್ರಾಖಿಥೆರಪಿ ಸೌಲಭ್ಯವೂ ಇದೆ.

ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ದುಬಾರಿಯಾಗಿರುವ ಈ ಕಾಲದಲ್ಲಿ  ಆಸ್ಪತ್ರೆಯು  ಬಿಪಿಎಲ್ ಕುಟುಂಬಗಳ ರೋಗಿಗಳಿಗೆ ಮಿತದರದಲ್ಲಿ   ವಿವಿಧ  ಯೋಜನೆಗಳಡಿಯಲ್ಲಿ ಚಿಕಿತ್ಸೆಯೊದಗಿಸುತ್ತಿದೆ.