`ಅಲ್ಪಸಂಖ್ಯಾತ ಮಹಿಳೆಯರನ್ನು ಪಾಕ್ ಸೇನೆ ಲೈಂಗಿಕ ಗುಲಾಮರನ್ನಾಗಿಸಿದೆ’

ನ್ಯೂಯಾರ್ಕ್ : ಪಾಕಿಸ್ತಾನ ಸೇನೆಯು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರನ್ನು ಲೈಂಗಿಕ ಗುಲಾಮರನ್ನಾಗಿ ಉಪಯೋಗಿಸುತಿದೆ ಎಂದು ಪಾಕಿಸ್ತಾನದ ಅಲ್ಪಸಂಖ್ಯಾತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯುರೋಪಿಯನ್ ಆರ್ಗನೈಝೇಶನ್ ಆಫ್ ಪಾಕಿಸ್ತಾನ್ ಮೈನಾರಿಟೀಸ್ ಆರೋಪಿಸಿದೆ.

ವಿಶ್ವಸಂಸ್ಥೆಯ ಕಚೇರಿಯ ಮುಂಭಾಗದಲ್ಲಿ ಪ್ರಾರ್ಥನೆ ಹಾಗೂ ಪ್ರತಿಭಟನಾ ಪ್ರದರ್ಶನ ನಡೆಸಿದ ಸಂಘಟನೆಯು ಪಾಕಿಸ್ತಾನಿ ಸೇನೆ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ತಮ್ಮ ಕುಟುಂಬಗಳಿಂದ ಪ್ರತ್ಯೇಕಿಸಿ ಅವರ ಮೇಲೆ ಅತ್ಯಾಚಾರ ನಡೆಸುತ್ತಿದೆ ಎಂದು ದೂರಿದೆ.

ಲಾಹೋರ್ ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗಳನ್ನು ಉಲ್ಲೇಖಿಸಿದ ಸಂಘಟನೆ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ದೇಶದಲ್ಲಿ ಹೆಚ್ಚಾಗುತ್ತಿವೆ ಎಂದು ಹೇಳಿದೆ.

ಪಾಕಿಸ್ತಾನದ ಅಲ್ಪಸಂಖ್ಯಾತರ ಬವಣೆಯ ದ್ಯೋತಕವಾಗಿ ಮುರಿದ ಕುರ್ಚಿಯೊಂದನ್ನು ಸಾಂಕೇತಿಕವಾಗಿ ಪ್ರತಿಭಟನೆ ಸಂದರ್ಭ ಪ್ರದರ್ಶಿಸಲಾಗಿತ್ತು  ವಿವಿಧ ಧರ್ಮಗಳ 100 ಕ್ಕೂ ಹೆಚ್ಚು ಮಹಿಳೆಯರು ಮೋಂಬತ್ತಿ ಹೊತ್ತಿಸಿ ಪಾಕಿಸ್ತಾನ ಸೇನೆಯಿಂದ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಡುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರ ಬವಣೆಯನ್ನು ಜಗತ್ತನ ಮುಂದಿಡುವ ಪ್ರಯತ್ನ ಮಾಡಿದರು.

ಈ ಬಗ್ಗೆ ಚರ್ಚಿಸಲು ವಿಶ್ವ ಸಂಸ್ಥೆ ವಿಶೇಷ ಅಧಿವೇಶನವನ್ನು ಕರೆಯಬೇಕೆಂಬ ಆಗ್ರಹವೂ ಸಂಘಟನೆಯಿಂದ ಕೇಳಿಬಂದಿದೆ. ಪಾಕಿಸ್ತಾನದ ಜನಗಣತಿಯ ಪ್ರಕಾರ ಅಲ್ಲಿನ 16 ಕೋಟಿ ಜನಸಂಖ್ಯೆಯಲ್ಲಿ ್ಲ ಧಾರ್ಮಿಕ ಅಲ್ಪಸಂಖ್ಯಾತರು ಶೇ 5ರಷ್ಟಾಗಿದ್ದರೂ ವಾಸ್ತವವಾಗಿ ಅವರ ಜನಸಂಖ್ಯೆ ಅದಕ್ಕಿಂತ ಬಹಳಷ್ಟು ಹೆಚ್ಚಿದೆಯೆಂದು ಸಂಘಟನೆ ಹೇಳಿದೆ.