ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಇನ್ನೂ ನಿರ್ಲಕ್ಷಿತರು, ದಮನಿತರು

2014ರ ಸುಪ್ರೀಂ ಕೋರ್ಟ್ ಆದೇಶವನ್ನು ಪಾಕ್ ಸರ್ಕಾರ ಸಮರ್ಥವಾಗಿ ಪರಿಪಾಲಿಸಿದರೆ ಇಷ್ಟು ದಿನಗಳ ಕಾಲ ದೈಹಿಕವಾಗಿ, ಆರ್ಥಿಕವಾಗಿ ತೀವ್ರ ಆಕ್ರಮಣ ಎದುರಿಸಿರುವ ಹಿಂದೂ ಮತ್ತು ಕ್ರೈಸ್ತ ಸಮೂಹಗಳು ನೆಮ್ಮದಿಯಿಂದ ಇರಲು ಸಾಧ್ಯ.

ವಿಶ್ಲೇಷಣೆ

ಪಾಕಿಸ್ತಾನದ ಸರ್ಕಾರಕ್ಕೆ ದೇಶದಲ್ಲಿನ ಅಲ್ಪಸಂಖ್ಯಾತರು ಮತ್ತು ವಿಭಿನ್ನ ಜನಾಂಗೀಯ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶಿಸಿ ಎರಡು ತಿಂಗಳುಗಳೇ ಕಳೆದಿದ್ದರೂ ಅಲ್ಲಿನ ಸರ್ಕಾರ ಇನ್ನೂ ತನ್ನ ನಿರ್ಲಕ್ಷ್ಯ ಧೋರಣೆಯನ್ನೇ ಮುಂದುವರೆಸಿದ್ದು ಕ್ರೈಸ್ತ ಚರ್ಚುಗಳ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

2014ರ ಜೂನ್ 19ರಂದು ತನ್ನ ಆದೇಶವೊಂದರಲ್ಲಿ ಸುಪ್ರೀಂಕೋರ್ಟ್ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ದೇಶದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಸೃಷ್ಟಿಸುವ ಸಲುವಾಗಿ ಪ್ರಾದೇಶಿಕ ಕಾರ್ಯಪಡೆಗಳನ್ನು ರೂಪಿಸಲೂ ಆದೇಶಿಸಿತ್ತು. ಧಾರ್ಮಿಕ ಮತ್ತು ಪೂಜಾಕೇಂದ್ರಗಳ ಮೇಲಿನ ಆಕ್ರಮಣ ಮತ್ತು ದ್ವೇಷ ಭಾಷಣಗಳನ್ನು ನಿಯಂತ್ರಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿತ್ತು.

2013ರಲ್ಲಿ 85 ಕ್ರೈಸ್ತರ ಹತ್ಯೆಗೆ ಕಾರಣವಾದ ಪೇಷಾವರ್ ಚರ್ಚ್ ಆಕ್ರಮಣದ ಹಿನ್ನೆಲೆಯಲ್ಲಿ ನೀಡಿದ ಈ ತೀರ್ಪನ್ನು ಸ್ವಾಗತಿಸಿದ್ದ ಅಲ್ಪಸಂಖ್ಯಾತರು ಮತ್ತು ನಾಗರಿಕ ಸಮಾಜದ ಹಿರಿಯರು ನ್ಯಾಯಮೂರ್ತಿ ತಸ್ಸಾದುಕ್ ಹುಸೇನ್ ಜಿಲಾನಿಯವರನ್ನು ಅಭಿನಂದಿಸಿದ್ದರು.

ಪಾಕಿಸ್ತಾನದ ರಾಜಕಾರಣದಲ್ಲಿ ಇಂತಹ ತೀರ್ಪುಗಳು ಅಪರೂಪವಾಗಿದ್ದು ಸುಪ್ರೀಂ ಕೋರ್ಟ್ ತೀರ್ಪು ಆಶಾವಾದ ಮೂಡಿಸಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ಬೇಸರ ತಂದಿದೆ ಎಂದು ಕ್ರೈಸ್ತ ಸಮುದಾಯದ ಬಿಷಪ್ ಅಲೆಕ್ಷಾಂಡರ್ ಜಾನ್ ಮಲಿಕ್ ಹೇಳಿದ್ದಾರೆ. ಸಾಮಾಜಿಕ ನ್ಯಾಯ ಕೇಂದ್ರ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಪಾಕಿಸ್ತಾನ ಸರ್ಕಾರ ಸುಪ್ರೀಂಕೋರ್ಟ್ ಆದೇಶಗಳಿಗೆ ಅನುಸಾರವಾಗಿ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಲೂ ನಿರಾಕರಿಸಿದ್ದು ಪಂಜಾಬ್ ಪ್ರಾಂತ್ಯದಲ್ಲಿ ಶೇ 32ರಷ್ಟು ಪ್ರಕರಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದರೆ ಬಲೂಚಿಸ್ತಾನದಲ್ಲಿ ಶೇ 50ರಷ್ಟು ನೀಡಲಾಗಿದೆ. ಸರ್ಕಾರ ರಚಿಸಿದ್ದ ಸಚಿವ ಸಮಿತಿಗಳು ಮತ್ತು ಅಂತರ್ ಸಚಿವ ಸಮಿತಿಗಳು ಯಾವುದೇ ರೀತಿಯ ಮಾಹಿತಿಯನ್ನು ಒದಗಿಸಿಲ್ಲ. 2015ರಲ್ಲಿ ಯೋಹಾನಾಬಾದಿನಲ್ಲಿರುವ ಕ್ರೈಸ್ತ ಸಮುದಾಯವೇ ಪ್ರಧಾನವಾಗಿ ವಾಸಿಸುವ ಕೇರಿಯೊಂದರ ಮೇಲೆ ನಡೆಸಿದ ಅವಳಿ ಆತ್ಮಹತ್ಯಾ ದಾಳಿ ಸಂಭವಿಸಿದ್ದು ಪಂಜಾಬ್ ಸರ್ಕಾರ ತನ್ನ ಸುರಕ್ಷತಾ ಕ್ರಮಗಳ ವರದಿಯನ್ನು ಸಲ್ಲಿಸಿದ ಐದು ದಿನಗಳ ನಂತರ ಈ ದಾಳಿ ಜರುಗಿತ್ತು.

ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲು ರಾಷ್ಟ್ರೀಯ ಸಮಿತಿಯೊಂದರ ಅವಶ್ಯಕತೆ ಇದ್ದು ಚರ್ಚ್ ಮತ್ತು ಹಿಂದೂ ದೇವಳಗಳ ಸುರಕ್ಷತೆ ಇಂದಿಗೂ ಸಹ ಅಪಾಯದಲ್ಲಿದೆ, ಭದ್ರತೆಗಾಗಿ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿ ಸದಾ ತೂಕಡಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಬಿಷಪ್ ಮಲಿಕ್ ಹೇಳುತ್ತಾರೆ. ಚರ್ಚುಗಳಲ್ಲಿ ನಡೆಯಲಾಗುವ  ಸಮಾರಂಭಗಳ ಮಾಹಿತಿಯನ್ನು ಜಿಲ್ಲಾ ಪೊಲೀಸಿಗೆ ಸಲ್ಲಿಸಲಾಗುತ್ತಿದ್ದು ಸಭೆಗೆ ರಕ್ಷಣೆ ನೀಡಲು ಐವರು ಪೊಲೀಸರನ್ನು ಕಳುಹಿಸಲಾಗುತ್ತಿದೆ. ಪೊಲೀಸರು ತಮ್ಮ ನಿಯೋಜಿತ ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ ಕ್ರೈಸ್ತ ಸಮುದಾಯದ ಯುವಕರೇ ಭದ್ರತೆ ಒದಗಿಸಲು ಮುಂದಾಗುತ್ತಾರೆ ಎಂದು ಮಲಿಕ್ ಹೇಳುತ್ತಾರೆ.

ಯೋಹಾನಾಬಾದ್ ಘಟನೆಯಲ್ಲಿ ಚರ್ಚಿಗೆ ಸೂಕ್ತ ರಕ್ಷಣೆ ಇಲ್ಲದಿದ್ದುದನ್ನು ಯಾರೂ ಸಹ ಪ್ರಶ್ನಿಸಿಲ್ಲ. ಪ್ರಾಂತೀಯ ಸರ್ಕಾರಗಳೂ ಸಹ ಪೂಜಾಕೇಂದ್ರಗಳನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿವೆ ಎಂದು ಸಂಸ್ಥೆಯ ನಿರ್ದೇಶಕ ಪೀಟರ್ ಜಾಕಬ್ ಆರೋಪಿಸುತ್ತಾರೆ.  2014ರ ಸುಪ್ರೀಂ ಕೋರ್ಟ್ ಆದೇಶವನ್ನು ಪಾಕ್ ಸರ್ಕಾರ ಸಮರ್ಥವಾಗಿ ಪರಿಪಾಲಿಸಿದರೆ ಇಷ್ಟು ದಿನಗಳ ಕಾಲ ದೈಹಿಕವಾಗಿ, ಆರ್ಥಿಕವಾಗಿ ತೀವ್ರ ಆಕ್ರಮಣ ಎದುರಿಸಿರುವ ಹಿಂದೂ ಮತ್ತು ಕ್ರೈಸ್ತ ಸಮೂಹಗಳು ನೆಮ್ಮದಿಯಿಂದ ಇರಲು ಸಾಧ್ಯ, ಪಾಕಿಸ್ತಾನ ಒಂದು ಶಾಂತಿಯುತ ದೇಶವಾಗಿರಲು ಸಾಧ್ಯ ಎಂದು ಪೀಟರ್ ಹೇಳಿದ್ದಾರೆ. ಕ್ರೈಸ್ತ ಸಮುದಾಯದ ಹಲವು ನಾಯಕರು ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಪಾಕ್ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.