ಬಿಜೆಪಿಯೊಂದಿಗೆ ಕಾಂಗ್ರೆಸ್ಸಿಗರು : ಸಚಿವ ರೈ ನೆತ್ತಿಗೇರಿದ ಸಿಟ್ಟು

ರಮಾನಾಥ ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾರತೀಯ ಜನತಾ ಪಾರ್ಟಿಯೊಂದಿಗೆ ಸೇರಿಕೊಂಡು ಬಂದಿರುವುದೇ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಸಿಟ್ಟು ಹತ್ತಲು ಕಾರಣ.

ಎತ್ತಿನಹೊಳೆ ಯೋಜನೆ ಸಂಬಂಧಿಸಿ ಸಮಾಜಾಯಿಸಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೇರಿಕೊಂಡಿದ್ದರು. ಇದು ಸಹಜವಾಗಿ ಅರಣ್ಯ ಸಚಿವರನ್ನು ಕೆಣಕಿದಂತಿತ್ತು.

ಬಿಜೆಪಿ ಮುಖಂಡರೊಂದಿಗೆ ಇದ್ದ ಕಾಂಗ್ರೆಸ್ ಮುಖಂಡರಲ್ಲಿ ಮಾಜಿ ಶಾಸಕ, ಡಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ವಿಜಯಕುಮಾರ್ ಶೆಟ್ಟಿ, ಮಾಜಿ ಉಪಮೇಯರ್, ಹಾಲಿ ಕಾಪೆರ್Çರೇಟರ್ ಚಿತ್ರಾಪುರ, ಶಾಸಕ ಸ್ಥಾನದ ಆಕ್ಷಾಂಕ್ಷಿ ಮತ್ತು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನಿಕಟವರ್ತಿ ಕಾಂಗ್ರೆಸ್ಸಿನಿಂದ ಅಮಾನತಾಗಿರುವ ಹರಿಕೃಷ್ಣ ಬಂಟ್ವಾಳ್ ಪ್ರಮುಖರು.

ಬೆಂಗಳೂರು-ಕೋಲಾರ ಪ್ರದೇಶದಲ್ಲಿ ಬಿಜೆಪಿ ಮುಖಂಡರು ಎತ್ತಿನಹೊಳೆ ಯೋಜನೆಗೆ ಬೆಂಬಲ ನೀಡುತ್ತಿದ್ದು, ಕರಾವಳಿಯಲ್ಲಿ ಮಾತ್ರ ಬಿಜೆಪಿ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದಲ್ಲದೆ ಇಲ್ಲಿನ ಕಾಂಗ್ರೆಸ್ ಸಚಿವರು, ಶಾಸಕರ ವಿರುದ್ಧ ಮಾನಹಾನಿರಕರ ಪ್ರಚಾರ ನಡೆಸುತ್ತಿದೆ. ಈ ವಿದ್ಯಮಾನದ ನಡುವೆ ಜನಾರ್ದನ ಪೂಜಾರಿ ಬೆಂಬಲಿಗ ಕಾಂಗ್ರೆಸಿಗರು ಬಿಜೆಪಿಯೊಂದಿಗೆ ಸೇರಿಕೊಂಡು ವಿರೋಧ ಮಾಡುತ್ತಿರುವುದು ಆಡಳಿತದಲ್ಲಿರುವ ಮುಖಂಡರಿಗೆ ಇರಿಸುಮುರಿಸು ತಂದಿದೆ.

ಮುಖ್ಯಮಂತ್ರಿ ಸಮ್ಮುಖದಲ್ಲಿ ಸ್ವಂತ ಜಿಲ್ಲೆಯ ಕಾಂಗ್ರೆಸ್ಸಿಗರು ವಿರೋಧ ಮಾಡುತ್ತಿರುವುದು ಕೂಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಸಿವಿಸಿ ಉಂಟುಮಾಡಿರುವುದು ಸುಳ್ಳಲ್ಲ.

ರಾಜಕೀಯ ಮಾಡಲು ಮಾಧ್ಯಮಕ್ಕೆ ಜೋತು ಬಿದ್ದಿರುವ ಜನಾರ್ದನ ಪೂಜಾರಿ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸುತ್ತಾ ಸಿದ್ದರಾಮಯ್ಯರನ್ನು ಟೀಕಿಸುವ ನೆಪದಲ್ಲಿ ರಮಾನಾಥ ರೈಯವರನ್ನು ಗುರಿಯಾಗಿರಿಸಕೊಂಡಿರುವುದು ಒಂದೆಡೆಯಾದರೆ, ಇತ್ತ ಪೂಜಾರಿ ಬೆಂಬಲಿಗರು ಎಲ್ಲೆಲ್ಲ ಸಾಧ್ಯವಿದೆಯೊ ಅಲ್ಲೆಲ್ಲ ತನ್ನ ಮತ್ತು ಸರಕಾರದ ವಿರುದ್ಧ ಕತ್ತಿಮಸೆಯುತ್ತಿರುವುದು ಉಸ್ತುವಾರಿ ಸಚಿವರಲ್ಲಿ ಅಸಹನೆಯನ್ನು ಮೂಡಿಸಿದೆ.

ವಿರೋಧ ಪಕ್ಷ ಬಿಜೆಪಿ ಎತ್ತಿನಹೊಳೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರೆ, ಅದರೊಂದಿಗೆ ಸೇರಿಕೊಂಡಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಕಾಂಗ್ರೆಸ್ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ನಿದ್ದೆಗೇಡಿತನ ಕಾರಣ ಎನ್ನುತ್ತಾರೆ ಅವರದೇ ಪಕ್ಷದವರು.