ಎಸ್ಸಿಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕ್ ಸ್ಕೀಂ ಬಗ್ಗೆ ಕೇಂದ್ರ ಸಚಿವ ಮೇಘವಾಲ್ ಮೆಚ್ಚುಗೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೊದಲ ಬಾರಿ ಮೊಬೈಲ್ ಬ್ಯಾಂಕ್‍ನ್ನು ಪರಿಚಯಿಸಿದ ಹೆಗ್ಗಳಿಕೆ ಎಸ್‍ಸಿಡಿಸಿಸಿ ಬ್ಯಾಂಕಿನದ್ದು. ಈ ಮೊಬೈಲ್ ಬ್ಯಾಂಕ್‍ನ್ನು ಕೇಂದ್ರ ಸರಕಾರದ ವಿತ್ತ ಸಚಿವರಾದ (ಕಾರ್ಪೋರೇಟ್ ವ್ಯವಹಾರ) ಅರ್ಜುನ್ ರಾಮ್ ಮೇಘವಾಲ್ ಅವರು ವೀಕ್ಷಣೆಗೈದÀು ಮೆಚ್ಚುಗೆ ವ್ಯಕ್ತ ಪಡಿಸಿದರು.

2007ರಿಂದ ಎಸ್‍ಸಿಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕ್ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದೆ. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾದ ಆಶ್ರಯವನ್ನು ಈ ಮೊಬೈಲ್ ಬ್ಯಾಂಕ್ ಪೂರೈಸುತ್ತಿದೆ. ಈ ಮೊಬೈಲ್ ಬ್ಯಾಂಕಿನಲ್ಲಿ ಒಂದು ಶಾಖೆಯು ನಿರ್ವಹಿಸುವ ಎಲ್ಲಾ ವಿಭಾಗಗಳಿವೆ ಜೊತೆಗೆ ಎಟಿಎಂ ಸೌಲಭ್ಯವು ಇರುವುದನ್ನು ಸಚಿವರಿಗೆ ಬ್ಯಾಂಕಿನ ಅಧ್ಯಕ್ಷರಾದ  ಎಂ ಎನ್ ರಾಜೇಂದ್ರ ಕುಮಾರ್ ವಿವರಿಸಿದರು.

ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆದ ಭಾರತ ಸರಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹಾಗೂ ಸ್ಟಾರ್ಟ್ ಆಪ್ ಮತ್ತು ಸ್ಟ್ಯಾಂಡ್ ಆಪ್ ಕುರಿತು ಮಾಹಿತಿ ಶಿಬಿರ, ಫಲಾನುಭವಿಗಳ ಕಾರ್ಯಗಾರದಲ್ಲಿ ಎಸ್‍ಸಿಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕ್ ವೀಕ್ಷಣೆಗೆ ಇರಿಸಲಾಗಿತ್ತು.

ಈ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ , ಬ್ಯಾಂಕಿನ ನಿರ್ದೇಶಕರಾದ  ಶಶಿಕುಮಾರ್ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಎಸ್, ಬ್ಯಾಂಕಿನ ಮಹಾಪ್ರಬಂಧಕರಾದ ರವೀಂದ್ರ ಬಿ ಉಪಸ್ಥಿತರಿದ್ದರು.