`ರಂಗನ್, ಹುಲಿ ಯೋಜನೆ ಜಾರಿಗೆ ಸರಕಾರ ಅವಕಾಶ ನೀಡುವುದಿಲ್ಲ’

ಕಾರ್ಕಳ : ಯಾವುದೇ ಬೆಲೆ ತೆತ್ತಾದರೂ ಬಡಜನರ ಬದುಕಿಗೆ ಮಾರಕವಾದ ಕಸ್ತೂರಿ ರಂಗನ್ ವರದಿಯ ಜಾರಿ ಹಾಗೂ ಹುಲಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಅರಣ್ಯ  ಸಚಿವರಾದ ರಮಾನಾಥ ರೈ ಸ್ಪಷ್ಟ ಭರವಸೆಯನ್ನು ನೀಡಿದ್ದು, ಜನತೆ ದೃತೀಗೆಡುವ ಅಗತ್ಯವಿಲ್ಲವೆಂದು ಮಾಜಿ ಶಾಸಕ  ಗೋಪಾಲ ಭಂಡಾರಿ ಹೇಳಿದ್ದಾರೆ.

ಅವರು ಕಾರ್ಕಳ ಬಜಗೋಳಿ ಪರಿಸರದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿ ವಿರುದ್ಧ ಜನಾಂದೋಲನ ಸಭೆಯಲ್ಲಿ ಮಾತನಾಡಿ, “ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸರಕಾರ  ಈ ಯೋಜನೆಗೆ ಸಂಬಂಧಪಟ್ಟ ಎಲ್ಲಾ ರಾಜ್ಯಗಳಿಗೂ ತಮ್ಮ ಅಭಿಪ್ರಾಯ ಮಂಡಿಸುವ ಮತ್ತು ತಿದ್ದುಪಡಿಗೆ ಸೂಕ್ತ ಮಾಹಿತಿಯನ್ನು ನೀಡುವ ಅವಕಾಶವನ್ನು ಕಲ್ಪಿಸಿತ್ತಾದರೂ ಅಂದಿನ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಆಕ್ಷೇಪಣೆಯನ್ನು ಸಲ್ಲಿಸದೇ ಬೀದಿಗಿಳಿದು ಪ್ರತಿಭಟನೆ ಮಾಡುವ ರಾಜಕೀಯ ಮಾಡಿತ್ತು. ಇದು ಬಿಜೆಪಿ ಈ ಪರಿಸರದ ಜನತೆ ಮಾಡಿದ ವ್ಯವಸ್ಥಿತ ಮೋಸ” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಕಳ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ಮಾತನಾಡಿ ಕಾರ್ಕಳದಲ್ಲಿ ನಡೆಯುವ ಸರಕಾರದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತಾನೇ ಮಾಡಿಸಿದ್ದೆಂದು ಬಿಂಬಿಸುವ ಫ್ಲೆಕ್ಸ್ ಸಂಸ್ಕøತಿಗೆ ಚಾಲನೆ ನೀಡಿದ ಸ್ಥಳೀಯ ಶಾಸಕರು ಕಸ್ತೂರಿ ರಂಗನ್ ವರದಿಯ ಜ್ಯಾರಿಗೂ ತನ್ನ ಪಕ್ಷವೇ ಕಾರಣವೆಂದು ಆತ್ಮಸಾಕ್ಷಿಗೆ ಸರಿಯಾಗಿ ಸತ್ಯವನ್ನು ಒಪ್ಪಿಕೊಳ್ಳಲಿ ಎಂದು ಹೇಳಿದರು.