ನಗರದಾದ್ಯಂತ ಬೀದಿ ದೀಪಗಳಿಗೆ ಎಲ್ ಇ ಡಿ ಬಲ್ಬ್ ಅಳವಡಿಸಲು ಸಚಿವ ಬೇಗ್ ಸೂಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಾದ್ಯಂತ ಬೀದಿದೀಪಗಳಿಗೆ ಎಲ್ ಇ ಡಿ ಬಲ್ಬ್ ಅಳವಡಿಸುವಂತೆ ಹಜ್ ಮತ್ತು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಮನಪಾಕ್ಕೆ ಸೂಚಿಸಿದ್ದಾರೆ.

ಶನಿವಾರ ಪೌರ ಪ್ರತಿನಿಧಿಗಳ ಕಾರ್ಯ ಪರಿಶೀಲನಾ ಸಭೆಯಲ್ಲಿ ಮನಪಾದ ವಿದ್ಯುತ್ ಬಿಲ್ ಕಡಿಮೆಗೊಳಿಸುವ ಬಗ್ಗೆ ಮಾತನಾಡುತ್ತಾ ಅವರು, “ನಗರದಾದ್ಯಂತ ಬೀದಿ ದೀಪಗಳಿಗೆ ಎಲ್ ಇ ಡಿ ಬಲ್ಬುಗಳನ್ನು ಅಳವಡಿಸಿದರೆ ಮನಪಾದ ವಿದ್ಯುತ್ ಬಿಲ್ ಕಡಿಮೆಯಾಗಬಹುದು” ಎಂದು ಸಲಹೆ ನೀಡಿದರು.

ಈ ವಿಚಾರವನ್ನು ಪರಿಣಾಮಕಾರಿಯಾಗಿಸಲು ಪ್ರಸ್ತಾವನೆ ನೀಡುವಂತೆ ಮತ್ತು ಶೀಘ್ರದಲ್ಲಿಯೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಪ್ರತಿನಿಧಿಗಳಿಗೆ ತಿಳಿಸುವಂತೆ ಸಚಿವರು, ಮನಪಾ ಆಯುಕ್ತ ಮಹಮ್ಮದ್ ನಝೀರಗೆ ಹೇಳಿದರು.

ಪ್ರಸಕ್ತ ಮನಪಾವು ಬೀದಿದೀಪಗಳ ವಿದ್ಯುತ್ ಬಿಲ್ ಪಾವತಿಗೆ 11 ಕೋಟಿ ರೂ ವೆಚ್ಚ ಮಾಡುತ್ತದೆ. ಒಂದು ವೇಳೆ ನಗರದಾದ್ಯಂತ ಬೀದಿ ದೀಪಗಳಿಗೆ ಎಲ್ ಇ ಡಿ ಬಲ್ಬುಗಳನ್ನು ಅಳವಡಿಸಿದರೆ ಮನಪಾದ ಬೀದಿ ದೀಪಗಳ ವಾರ್ಷಿಕ ವಿದ್ಯುತ ಬಿಲ್ 6 ಕೋಟಿಗೆ ಇಳಿಕೆಯಾಗಬಹುದು ಎಂದು ನಗರಪಾಲಿಕೆ ಇಂಜಿನಿಯರೊಬ್ಬರು ತಿಳಿಸಿದ್ದಾರೆ.