ಸೀಬರ್ಡ್ ನಿರಾಶ್ರಿತರ ಪರಿಹಾರ : 6 ತಿಂಗಳಲ್ಲಿ ವಿತರಣೆಗೆ ರಕ್ಷಣಾ ಸಚಿವ ಬಾಂಬ್ರೆ ಭರವಸೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : “ಸೀಬರ್ಡ್ ನಿರಾಶ್ರಿತರ ಪರಿಹಾರ ವಿತರಣೆ ಹಿನ್ನೆಲೆಯಲ್ಲಿ ಇರುವ ಸಮಸ್ಯೆಯನ್ನು ಇನ್ನು 6 ತಿಂಗಳಲ್ಲಿ ಪರಿಹರಿಸಿ ಸಮರ್ಪಕ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳುಲಾಗುವುದು” ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಸ ಬಾಂಬ್ರೆ ಭರವಸೆ ನೀಡಿದ್ದಾರೆ.

ಅವರು ಬುಧವಾರ ಕದಂಬ ನೌಕಾನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸೀಬರ್ಡ್ ಯೋಜನೆ ಮತ್ತು ಸಮಸ್ಯೆ ಹಿನ್ನೆಲೆಯಲ್ಲಿ ಮಹತ್ವದ ಸಭೆ ನಡೆಸಿದ ನಂತರದಲ್ಲಿ ಸಂಜೆ ಇಲ್ಲಿಯ ಮಹಾಮಾಯಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

“ಸೀಬರ್ಡ್ ನಿರಾಶ್ರಿತರ ಪರಿಹಾರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಎಲ್ಲ ಮಾಹಿತಿಯಿದೆ. ಈ ಬಗ್ಗೆ ಈಗಾಗಲೇ ಕ್ರಮ ಆರಂಭವಾಗಿದೆ. ಸುಮಾರು 4,000ಕ್ಕೂ ಅಧಿಕ ನಿರಾಶ್ರಿತರಿಗೆ ಇನ್ನು 6 ತಿಂಗಳಲ್ಲಿ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಬದ್ಧವಿದೆ” ಎಂದರು.

ಶೀಘ್ರ ಆರಂಭ

“ಸೀಬರ್ಡ್ ದ್ವಿತೀಯ ಹಂತದ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಇದು ಪೂರ್ಣಗೊಂಡಾಗ ಕದಂಬ ನೌಕಾನೆಲೆ ಏಷಿಯಾ ಖಂಡದಲ್ಲೇ ಅತಿ ದೊಡ್ಡ ನೌಕಾನೆಲೆ ಆಗಲಿದೆ” ಎಂದರು.

 ಪ್ರತ್ಯೇಕ ಮನವಿ

ಈ ಮಧ್ಯೆ ಸೀಬರ್ಡ್ ನಿರಾಶ್ರಿತರ ಸಮಸ್ಯೆ ಇತ್ಯರ್ಥಗೊಳಿಸುವಂತೆ ಮತ್ತು ಕಗ್ಗಂಟಾಗಿರುವ ಪರಿಹಾರ ಸಮಸ್ಯೆ ಬಗೆಹರಿಸುವಂತೆ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ನಿರಾಶ್ರಿತರು ಮತ್ತು ಬಿಜೆಪಿ ನಿಯೋಗ ರಕ್ಷಣಾ ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಬಿಜೆಪಿ ನಿಯೋಗದಲ್ಲಿ ಪ್ರಮುಖರಾದ ಸಾಯಿ ಕಿರಣಶೇಟಿಯಾ, ಭಾಸ್ಕರ ನಾರ್ವೇಕರ್, ಅರುಣ ನಾಡಕರ್ಣಿ, ನ್ಯಾಯವಾದಿ ನಾಗರಾಜ ನಾಯಕ ಮತ್ತಿತರರು ಇದ್ದರು.