ಸಚಿವ ಆಂಜನೇಯರ ಕೊರಗ ಕಾಲೊನಿ ಅಭಿವೃದ್ಧಿ ಹಳೆ ಭರವಸೆ ಇನ್ನೂ ಈಡೇರಿಲ್ಲ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊರಗ ಕಾಲೊನಿಯನ್ನು ಭಾರೀ ಮಟ್ಟದಲ್ಲಿ ಅಭಿವೃದ್ಧಿಪಡಿಸುವುದಾಗಿ 8 ತಿಂಗಳ ಹಿಂದೆ  ನೀಡಿದ್ದ ಸಮಾಜ ಅಭಿವೃದ್ಧಿ ಸಚಿವ ಆಂಜನೇಯರ ಭರವಸೆಗಳು ಇನ್ನೂ ಈಡೇರಿಲ್ಲ. ಡಿಸೆಂಬರ್ 31ರಂದು ಉಡುಪಿಗೆ ಭೇಟಿ ನೀಡಿದ್ದ ಸಚಿವರು, ಹಿಂದೆ ನೀಡಿದ್ದ ಭರವಸೆಗಳೆನ್ನೆಲ್ಲಾ ಈಡೇರಿಸುವುದಾಗಿ ಮತ್ತೊಮ್ಮೆ ಮಾತುಕೊಟ್ಟಿದ್ದಾರೆ.

2016ರ ಎಪ್ರಿಲ್ 16ರಂದು ಮಂಗಳೂರಿನ ಕೆರೆಕಾಡು ಕೊರಗ ಕಾಲೊನಿಗೆ ಭೇಟಿ ನೀಡಿ ಕೊರಗ ಕಾಲೊನಿಯನ್ನು ಸುಮಾರು ರೂ 10 ಕೋಟಿ ಸವಲತ್ತಿನಡಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇದುವರೆಗೆ ಕೊರಗ ಕಾಲೊನಿಯಲ್ಲಿ ಕೇವಲ ಸಮುದಾಯ ಭವನ ನಿರ್ಮಾಣ ಕಾರ್ಯ ಮಾತ್ರ ಆರಂಭಗೊಂಡಿದ್ದು, ಅದು ಕೂಡ ಒಂದು ತಿಂಗಳ ಹಿಂದೆಯಷ್ಟೆ ಆರಂಭವಾಗಿದೆ.

ಸಚಿವ ಆಂಜನೇಯರು 8 ತಿಂಗಳ ಹಿಂದೆ ಕೆರೆಕಾಡು ಕೊರಗ ಕಾಲೊನಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭೇಟಿ ನೀಡಿ ಈ ಭರವಸೆಗಳನ್ನು ಘೋಷಿಸಿದ್ದರು.

ಈ ಸಂದರ್ಭ ರೂ 10 ಕೋಟಿ ಯೋಜನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿ ಮಾಡಲಾಗುವುದು, ಇದರಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಕೊರಗ ಮನೆಗಳ ದುರಸ್ತಿ, ಸ್ನಾನದ ಕೊಠಡಿ ಮತ್ತು ಶೌಚಾಲಯ ನಿರ್ಮಾಣ ಕೂಡ ಒಳಗೊಂಡಿದೆ.

ರೂ 12 ಲಕ್ಷ ವೆಚ್ಚದಲ್ಲಿ ಕೆರೆಕಾಡಿನಲ್ಲಿ ಕೊರಗ ಸಮುದಾಯ ಭವನ ನಿರ್ಮಾಣ, ಕೊರಗ ಸಮುದಾಯದ ಜನಸಂಖ್ಯೆಯ ಇಳಿಕೆಯ ಹಿಂದಿರುವ ಕಾರಣಗಳನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಅಧ್ಯಯನಕ್ಕೆ ಕೈಗೊಳ್ಳುವುದು ಇವೇ ಮೊದಲಾದ ಘೋಷಣೆಗಳು ಭರವಸೆಯ ಪಟ್ಟಿಯಲ್ಲಿದ್ದವು. ಆದರೆ ಸಮುದಾಯ ಭವನ ನಿರ್ಮಾಣ ಕಾರ್ಯಾರಂಭ ಹೊರತುಪಡಿಸಿದರೆ ಉಳಿದ ಯಾವುದೇ ಭರವಸೆಗಳು ಈಡೇರಿಲ್ಲ.

ಉಡುಪಿಗೆ ಇತ್ತೀಚೆಗೆ ಭೇಟಿಯಿತ್ತ ಸಚಿವರು ಕೊರಗ ಮತ್ತು ಜೇನುಕುರುಬ ಸಮುದಾಯಗಳಿಗೆ ಆಂತರಿಕ ಮೀಸಲಾತಿ, ಮನೆ ನಿರ್ಮಾಣಕ್ಕೆ ನೀಡಲಾಗುತ್ತಿರುವ ಸಹಾಯಧನವನ್ನು ರೂ 2 ಲಕ್ಷದಿಂದ 4.5 ಲಕ್ಷಕ್ಕೆ ಏರಿಕೆ ಮತ್ತು ಉಡುಪಿಯಲ್ಲಿ ಕೊರಗ ಸಮುದಾಯದ ಜನಸಂಖ್ಯೆ ಇಳಿಕೆಗೆ ಕಾರಣಗಳನ್ನು ಕಂಡುಹಿಡಿಯುವ ಬಗ್ಗೆ ಪರಿಶೀಲನೆ ನಡೆಸುವುದು ಇವೇ ಮೊದಲಾದ ಭರವಸೆಗಳನ್ನು ನೀಡಿದ್ದಾರೆ.

ಸವಲತ್ತು ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಅಂದಾಜು ಲೆಕ್ಕಾಚಾರ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದರಲ್ಲಿ ರಸ್ತೆಗಳ ಅಭಿವೃದ್ಧಿ, ನೀರು ಶುದ್ದೀಕರಣ ಪ್ಲ್ಯಾಂಟ್ ಅಳವಡಿಕೆ ಮತ್ತು ಇತರ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯನ್ನು ಒಳಗೊಂಡಿದೆ ಎಂದು ದಕ್ಷಿಣ ಕನ್ನಡ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ ಅಧಿಕಾರಿ ಹೇಮಲತಾ ಬಿ ಎಸ್ ಹೇಳಿದ್ದಾರೆ.