ಗಂಡನ ಆಸಕ್ತಿಗೂ ನನ್ನದಕ್ಕೂ ಅಜಗಜಾಂತರ

ಪ್ರ : ನನಗೆ ಮದುವೆಯಾಗಿ ಹತ್ತು ವರ್ಷಗಳಾದವು. ಒಬ್ಬಳು ಮಗಳಿದ್ದಾಳೆ. ನನ್ನ ಗಂಡ ಕಾಲೇಜಿನಲ್ಲಿ ಪ್ರೊಫೆಸರ್. ನಾನು ಹೌಸ್ ವೈಫ್. ನನ್ನ ಗಂಡ ತುಂಬಾ ಮೃದು ಸ್ವಭಾವದವರು. ಒಳ್ಳೆಯ ಸಂಪಾದನೆ ಇದೆ. ನನ್ನ ಮೇಲೆ ಪ್ರೀತಿಯೂ ಇದೆ. ನನಗೆ ಮನೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಅತ್ತೆ, ಮಾವನೂ ಊರಿನಲ್ಲಿ ಇರುವುದರಿಂದ ನನಗೆ ಯಾವ ಕಟ್ಟುಪಾಡುಗಳೂ ಇಲ್ಲ. ಆದರೂ ನನಗೆ ಒಮ್ಮೊಮ್ಮೆ ಬೇಸರ ಕಾಡುತ್ತದೆ. ಅದಕ್ಕೆ ಕಾರಣ ನನ್ನ ಗಂಡನ ಹವ್ಯಾಸಕ್ಕೂ ನನ್ನದಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು. ನನಗೆ ಮೊದಲಿನಿಂದಲೂ ಹಿಂದಿ ಮತ್ತು ಕನ್ನಡ ಸಿನಿಮಾ ನೋಡುವುದೆಂದರೆ ಬಲು ಇಷ್ಟ. ಅದರಲ್ಲೂ ನನಗೆ ಹಿಡಿಸುವುದು ಸಾಮಾಜಿಕ ಚಿತ್ರಗಳು. ಆದರೆ ನನ್ನ ಗಂಡನಿಗೆ ಅದರಲ್ಲಿ ಆಸಕ್ತಿಯೇ ಇಲ್ಲ. ಅವರು ಬರೀ ಇಂಗ್ಲೀಷ್ ಫಿಲ್ಮ್ ಮಾತ್ರ ನೋಡುತ್ತಾರೆ. ಇಲ್ಲವಾದರೆ ಅವರು ನೋಡುವುದು ಅವಾರ್ಡ್ ಮೂವೀಸ್. ನನಗೆ ಅದು ಇಷ್ಟವಿಲ್ಲ. ನನಗೆ ಫಿಲ್ಮಿಡ್ಯಾನ್ಸ್ ಶೋ ಇಷ್ಟವಾದರೆ ಗಂಡ ಬರೀ ಭರತನಾಟ್ಯ ನೋಡುತ್ತಾರೆ. ಶಾಸ್ತ್ರೀಯ ಸಂಗೀತ ಅವರಿಗೆ ಪ್ರಾಣವಾದರೆ ನನಗೆ ಅದನ್ನು ಕೇಳಿದರೆ ನಿದ್ದೆ ಬರುತ್ತದೆ. ನನಗೆ ಹಬ್ಬ, ಜಾತ್ರೆ, ಬರ್ತ್‍ಡೇ ಪಾರ್ಟಿ ಎಲ್ಲವೂ ಇಷ್ಟ. ಎಲ್ಲ ಕಡೆ ಡ್ರೆಸ್ ಮಾಡಿಕೊಂಡು ಮ್ಯಾಚಿಂಗ್ ಸೆಟ್ ಧರಿಸಿ ಓಡಾಡುವ ಬಯಕೆ. ಗಂಡ ತುಂಬಾ ಸರಳ ವ್ಯಕ್ತಿ. ಅವರಿಗೆ ಪಾರ್ಟಿಗಳೆಂದರೆ ಅಲರ್ಜಿ. ಸಂಜೆ ಹೊತ್ತು ಬೈಕಿನಲ್ಲಿ ಅವರ ಸೊಂಟ ಬಳಸಿ ಹೊಟೇಲ್, ಮಾಲ್ ಅಂತ ತಿರುಗೋಣವೆಂದರೆ ಅವರು ಪುಸ್ತಕ ಹಿಡಿದು ಕುಳಿತುಬಿಡುತ್ತಾರೆ. ನಾನು ಹೋಗುತ್ತೇನೆ ಅಂತ ಹೇಳಿದರೆ ಬೇಡ ಅನ್ನುವುದಿಲ್ಲ. ಆದರೆ ನನಗೆ ಅವರ ಜೊತೆ ಹೋದರೇ ಇಷ್ಟವಾಗುತ್ತದೆ. ಮನೆಯಲ್ಲಿಯೂ ಅವರು ಟೀವಿಯಲ್ಲಿ ನೋಡುವುದು ಬರೀ ನ್ಯೂಸ್. ನನಗೆ ಆ ಚಾನೆಲ್ ಬಿಟ್ಟು ಉಳಿದವುಗಳೇ ಇಷ್ಟ. ಅವರು ಮನೆಯಲ್ಲಿ ಇದ್ದಷ್ಟು ಹೊತ್ತು ನನಗೆ ನನ್ನ ಇಷ್ಟವಾದ ಟೀವಿ ಪ್ರೋಗ್ರಾಂ ಸಹ ನೋಡಲಾಗುವುದಿಲ್ಲ. ನಮ್ಮ ಮುಂದಿನ ದಾಂಪತ್ಯ ಜೀವನ ಹೇಗೆ ಸಾಗಬಹುದು? ನಮ್ಮಿಬ್ಬರ ಜೋಡಿ ಸರಿ ಇಲ್ಲವೇ?

: ನೋಡಮ್ಮಾ , ಮದುವೆಯಾದ ದಂಪತಿಗಳ ಹವ್ಯಾಸಗಳು ಒಂದೇ ಇದ್ದರೆ ಮಾತ್ರ ಅವರದು ಯಶಸ್ವೀ ದಾಂಪತ್ಯ ಅಂತ ಹೇಳಲು ಬರುವುದಿಲ್ಲ. ಇಬ್ಬರ ಅಭಿರುಚಿಗಳು ಸ್ವಲ್ಪವಾದರೂ ಬೇರೆ ಬೇರೆ ಇದ್ದೇ ಇರುತ್ತದೆ. ದಾಂಪತ್ಯಜೀವನ ಒಳ್ಳೆಯ ರೀತಿಯಲ್ಲಿ ಸಾಗಲು ಮುಖ್ಯವಾಗಿ ಬೇಕಿರುವುದು ಒಬ್ಬರು ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ಅಸಡ್ಡೆ ತೋರಿಸದೇ ಅದನ್ನು ಗೌರವಿಸುವುದು. ತಮಗಿಷ್ಟವಾದ ವಿಷಯವೇ ಸಂಗಾತಿಗೂ ಇಷ್ಟವಾಗಬೇಕು ಎನ್ನುವ ಹಠ ಮತ್ತು ಪಾರ್ಟನರ್ ಆಸಕ್ತಿಯನ್ನು ಕ್ಷುಲ್ಲಕವಾಗಿ ನೋಡುವ ಗುಣ ಇದ್ದರೆ ಅಂತಹ ದಾಂಪತ್ಯಜೀವನ ವಿರಸದಲ್ಲಿ ಕೊನೆಗೊಳ್ಳುವ ಪ್ರಮೇಯವೇ ಹೆಚ್ಚು. ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಸಂಗಾತಿಯನ್ನು ಅವರಿದ್ದ ಹಾಗೇ ಸ್ವೀಕರಿಸಿದರೆ ಆಯಿತು. ಅವರನ್ನು ಬದಲಿಸುತ್ತೇನೆ ಅನ್ನುವ ಕೆಟ್ಟ ಹಠಕ್ಕೆ ಬಿದ್ದರೆ ಇಬ್ಬರ ನಡುವೆ ಬಿರುಕು ಮೂಡುವುದು ಸ್ವಾಭಾವಿಕ. ನಿಮ್ಮ ವಿಷಯದಲ್ಲಿ ಹೇಳುವುದಾದರೆ ನಿಮ್ಮ ಗಂಡ ಹೇಳಿಕೇಳಿ ಪ್ರೊಫೆಸರ್. ಅವರ ಮೆಚುರಿಟಿಗೂ ನಿಮ್ಮದಕ್ಕೂ ವ್ಯತ್ಯಾಸವಿರುವುದು ಸಹಜ. ಆದರೆ ಅವರು ತಮ್ಮ ಆಸಕ್ತಿಯನ್ನು ನಿಮ್ಮ ಮೇಲೆ ಹೇರುವುದಿಲ್ಲವಲ್ಲ. ಅದಕ್ಕೆ ಥ್ಯಾಂಕ್ಸ್ ಹೇಳಿ. ನೀವೂ ಸ್ವಾವಲಂಬಿಯಾಗಲು ಮೊದಲು ಕಲಿಯಿರಿ. ನಿಮ್ಮದೇ ಆದ ಸ್ಕೂಟಿ ಇಟ್ಟುಕೊಳ್ಳಿ. ಮಗಳ ಜೊತೆ ಇಲ್ಲಾ ನಿಮ್ಮ ಸ್ನೇಹಿತೆಯರ ಜೊತೆ ನಿಮಗೆ ಇಷ್ಟ ಬಂದ ಕಡೆ ಹೋಗಬಹುದಲ್ಲವೇ? ಅದಕ್ಕೇನೂ ಅವರು ಅಡ್ಡಿಪಡಿಸುವುದಿಲ್ಲವಲ್ಲ. ಸಾಧ್ಯವಾದ ಕಡೆ ಒಬ್ಬರು ಇನ್ನೊಬ್ಬರ ಖುಶಿಗೋಸ್ಕರ ಕಂಪೆನಿ ಕೊಡಿ. ಪ್ರತಿಯೊಂದು ಕಡೆಯೂ ಅವರು ನಿಮ್ಮ ಜೊತೆ ಬರಬೇಕೆನ್ನುವ ಸೆಂಟಿಮೆಂಟ್ಸ್ ಬೇಡ. ಮನೆಯಲ್ಲೂ ಬೇಕಿದ್ದರೆ ಇನ್ನೊಂದು ಚಿಕ್ಕ ಟೀವಿ ಇಟ್ಟುಕೊಳ್ಳಬಹುದು. ಇಬ್ಬರ ನಡುವೆ ಪ್ರೀತಿ, ಗೌರವ ಮತ್ತು ಹೊಂದಾಣಿಕೆ ಇದ್ದರೆ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತದೆ.