ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಾಲು ಆಂಧ್ರದ ಶಾಲಾ ಮಕ್ಕಳಿಗೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ಪಾದಿಸಲಾಗುತ್ತಿರುವ ಹಾಲು ಶೀಘ್ರದಲ್ಲಿಯೇ ಕರ್ನಾಟಕ ಹಾಲು ಒಕ್ಕೂಟದ ಮೂಲಕ ಆಂಧ್ರ ಪ್ರದೇಶದ ಶಾಲಾ ಮಕ್ಕಳಿಗೆ ಪೂರೈಕೆಯಾಗಲಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಎರಡು ಜಿಲ್ಲೆಗಳಿಂದ ಪ್ರತಿದಿನ 4 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಇದರಲ್ಲಿ 15,000 ಲೀಟರ್ ಹಾಲು ಮಿಗತೆ. ಇದಕ್ಕೆ ಹೆಚ್ಚುವರಿ 15,000 ಹಾಲನ್ನು ಹಾಸನ ಸಹಕಾರಿ ಹಾಲು ಒಕ್ಕೂಟದಿಂದ ಪಡೆದು  ಒಂದು ದಿನದಲ್ಲಿ ಅಲ್ಟ್ರಾ ಉಷ್ಣಸಂಸ್ಕಾರಕ್ಕೊಳಪಡಿಸಿದ ಹಾಲಾಗಿ ಪರಿವರ್ತಿಸಲಾಗುವುದು. ಹೀಗೆ ದಿನದಲ್ಲಿ ಒಟ್ಟು 30,000 ಲೀಟರ್ ಅಲ್ಟ್ರಾ ಉಷ್ಣಸಂಸ್ಕಾರಕ್ಕೊಳಪಡಿಸಿದ ಹಾಲನ್ನು ಆಂಧ್ರಪ್ರದೇಶಕ್ಕೆ ಪೂರೈಕೆ ಮಾಡಲಾಗುವುದು. ದಿನದಲ್ಲಿ 30,000 ಲೀಟರ್ ಹಾಲು ತಯಾರಿಸುವಂತೆ ಕೆಎಂಎಫ್, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ಸೂಚಿಸಿರುವುದರಿಂದ ಹಾಸನ ಸಹಕಾರಿ ಹಾಲು ಒಕ್ಕೂಟದಿಂದ 15,000 ಲೀಟರ್ ಹಾಲನ್ನು ಪಡೆಯಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ವಿವರಿಸಿದ್ದಾರೆ.

ವ್ಯಾಪಾರ ವಿಸ್ತರಣೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿಯಮಿತವು ಶೀಘ್ರದಲ್ಲಿಯೇ ಹಾಲು ವ್ಯವಹಾರವನ್ನು ಕೇರಳಕ್ಕೆ ವಿಸ್ತರಿಸಲಿದೆ. ಪ್ರಸಕ್ತ ಫ್ರಿಜ್ ಇಲ್ಲದೆ 90 ದಿನ ಬಳಸಲು ಯೋಗ್ಯವಾದ ಹಾಲಿನ ಫ್ಲೆಕ್ಸಿ ಪ್ಯಾಕೆಟುಗಳನ್ನು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಕೆಲವು ಭಾಗಗಳಿಗೆ ಪೂರೈಕೆ ಮಾಡುತ್ತಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಹೊಸ ಬ್ರ್ಯಾಂಡ್ ತೃಪ್ತಿ ಹಾಲಿನ ಫ್ಲೆಕ್ಸಿ ಪ್ಯಾಕೆಟನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ  ಶಾಲಾ ಮಕ್ಕಳಿಗೆ ವಿತರಿಸಲು ಸಿದ್ಧವಾಗಿದೆ. ಆದರೆ ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ರವಿರಾಜ್ ಹೇಳಿದ್ದಾರೆ.