ಮೇಟಿ ಬೆಂಬಲಿಗರಿಂದ ಟೀವಿ ಪತ್ರಕರ್ತರಿಗೆ ಹಲ್ಲೆ

ಬಾಗಲಕೋಟೆ : ಮಾಜಿ ಸಚಿವ ಮೇಟಿಯ ಬೆಂಬಲಿಗರು ನಿನ್ನೆ ನವನಗರದ ಅವರ ಮನೆಯ ಮುಂದೆ ಟೀವಿ ಚಾನೆಲ್ಲೊಂದರ ಇಬ್ಬರು ವರದಿಗಾರರು ಮತ್ತು ಕ್ಯಾಮರಾಮ್ಯಾನ್ ಒಬ್ಬರ ಮೇಲೆ ಹಲ್ಲೆ ನಡೆಸಿದರು.
ವರದಿಗಾರರೊಬ್ಬರ ಕಾಲಿಗೆ ಗಾಯವಾಗಿದೆ. ಮೇಟಿಯ ಬೆಂಬಲಿಗರು ಪತ್ರಕರ್ತರಿಗೆ ಬೆದರಿಕೆ ಹಾಗೂ ಬೈದಿದ್ದಾರೆ.

ಅಲ್ಲದೆ ಎಲ್ಲರನ್ನು ಬಲವಂತವಾಗಿ ಹೊರಗೆ ದಬ್ಬಿದ್ದಾರೆ.

ಈ ಘಟನೆ ಕುರಿತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ದೂರು ನೀಡಿದೆ.

ಇದೇ ವೇಳೆ ಮೇಟಿಯ ರಾಸಲೀಲೆ ಸೆರೆಹಿಡಿದಿದ್ದ ಪೊಲೀಸ್ ಪೇದೆ ಸುಭಾಷ್ ಮನೆಗೆ ಈಗ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮೇಟಿ ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆ ನಡೆಸುತ್ತಿರುವ ಚಿತ್ರಣವಿದೆ. ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಅಸ್ವಸ್ಥಗೊಂಡ ಮೇಟಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಬಳಿಕ ಆತ ಕೆಲವು ಸಂಬಂಧಿಕರೊಂದಿಗೆ ಅಜ್ಞಾತ ಸ್ಥಳಕ್ಕೆ ಕಾಲ್ಕಿತ್ತಿದ್ದಾನೆಂದು ಹೇಳಲಾಗಿದೆ.

ಮೇಟಿಯ ಲೈಂಗಿಕ ಹಗರಣ ಬೆಳಕಿಗೆ ಬರುತ್ತಲೇ ಬಿಜೆಪಿ ಕಾರ್ಯಕರ್ತರು ಬಸವೇಶ್ವರ ಸರ್ಕಲಿನಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕಿಂತ ಮುಂದೆ ಅವರು ಮೆರವಣಿಯೊಂದನ್ನೂ ಕೊಂಡೊಯ್ದಿದ್ದರು.

ಮೇಟಿ ಮನೆಗೂ ಪೊಲೀಸ್ ಭದ್ರತೆ ನೀಡಲಾಗಿದೆ. ಸದ್ಯ ಮಾಜಿ ಸಚಿವನ ಬೆಂಬಲಿಗರು ತಮ್ಮ ನಾಯಕ ರಕ್ಷಿಸಲು ಶತಾಯಗತಾಯ ಪ್ರಯತ್ನ ಮುಂದುವರಿಸಿದ್ದಾರೆ.

ಮೇಟಿ ರಕ್ಷಿಸಲು ಸೀಎಂ ಯತ್ನ : ಮುರಳಿ ಆರೋಪ

Àವದೆಹಲಿ : ಮಾಜಿ ಸಚಿವನ ದುರ್ವರ್ತನೆ ಗೊತ್ತಿದ್ದುಕೊಂಡೂ ಸೀಎಂ ಸಿದ್ದರಾಮಯ್ಯ, ರಾಸಲೀಲೆ ಪ್ರಕರಣದ ಆರೋಪಿ ಎಚ್ ವೈ ಮೇಟಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ರಾಜಶೇಖರ ಮುರಳಿ ಆಪಾದಿಸಿದ್ದಾರೆ. “ಸೀಎಂ ಮತ್ತು ಗೃಹ ಸಚಿವ ಪರಮೇಶ್ವರರನ್ನು ಭೇಟಿಯಾಗಲು ನಾನು ಪ್ರಯತ್ನಿಸಿದ್ದೆ. ಇಷ್ಟೇ ಅಲ್ಲದೆ ಕಾಂಗ್ರೆಸ್ಸಿನ ಇತರ ಹಿರಿಯ ನಾಯಕರನ್ನೂ ಭೇಟಿಯಾಗಲೂ ಪ್ರಯತ್ನಿಸಿದ್ದೆ. ಆದರೆ ಅದು ಸಾಧ್ಯವಾಗಿಲ್ಲ” ಎಂದು ಮುರಳಿ ಹೇಳಿದರು.

ಈಗ ಮೇಟಿಯ ಕೆಲವು ಬೆಂಬಲಿಗರು ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದಿರುವ ಮುರಳಿ, ಇನ್ನೂ ಇಬ್ಬರು ಸಚಿವರ ದುರ್ವರ್ತನೆ ಬಗ್ಗೆ ಮಾಹಿತಿ ನೀಡುವೆ ಎಂದಿದ್ದಾರೆ.