ಮಹಿಳೆಯರ ಅಸಹಾಯಕತೆ ದುರ್ಬಳಕೆ ಮಾಡಿಕೊಂಡ ಮೇಠಿ

ಸಚಿವೆ ಉಮಾಶ್ರೀ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಸಹಾಯ ಕೇಳಿಕೊಂಡು ಬಂದ ಯಾರನ್ನೇ ಆಗಲಿ, ಅದರಲ್ಲೂ ಮಹಿಳೆಯರ ಅಸಹಾಯಕತೆಯನ್ನು ದುರ್ಬಳಕೆ ಮಾಡುವುದು ಸರಿಯಲ್ಲ” ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ ಉಮಾಶ್ರೀ, “ಮೇಠಿ ಅಥವಾ ಇನ್ಯಾರೇ ಆಗಲೀ ಇಂತಹ ನೀಚ ಕೃತ್ಯದಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಮೇಠಿಯಿಂದ ರಾಜೀನಾಮೆ ಪಡೆದುಕೊಂಡು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ವರದಿ ಬಂದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ” ಎಂದು ಮೇಠಿ ಪ್ರಕರಣದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಘಟನೆ ದುರಾದೃಷ್ಟಕರ : ದಿನೇಶ್ ಗೂಂಡೂರಾವ್

“ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಮಾಜಿ ಸಚಿವ ಹೆಚ್ ವೈ ಮೇಟಿ ಪ್ರಕರಣ ನೋವು ತಂದಿದ್ದು, ಇದು ದುರಾದೃಷ್ಟಕರವಾದ ಘಟನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ನೋವು ವ್ಯಕ್ತಪಡಿಸಿದ್ದಾರೆ. ಆದರೆ ಇದು ಮೇಟಿಯ ವೈಯಕ್ತಿಕ ವಿಚಾರವಾಗಿದ್ದು, ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಈಗಾಗಲೇ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ, ಮೇಟಿಯಿಂದ ರಾಜೀನಾಮೆ ಪಡೆದುಕೊಂಡಾಗಿದೆ. ಇದಕ್ಕೂ ಸರ್ಕಾರದ ಆಡಳಿತಕ್ಕೂ ಸಂಬಂಧ ಇಲ್ಲ. ರಾಜಕಾರಣಿಗಳು ಮೌಲ್ಯಗಳನ್ನು ಎತ್ತಿ ಹಿಡಿಯಬೇಕು” ಎಂದು ಹೇಳಿದರು.