ಮೇಸ್ತಾ ಹಂತಕರಲ್ಲಿ ನಾಲ್ವರನ್ನು ಇನ್ನೂ ಏಕೆ ಬಂಧಿಸಿಲ್ಲ ?

ನತದೃಷ್ಟ ಯುವಕನ ತಂದೆ ಪ್ರಶ್ನೆ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ :  “ಮಗನ ಕೊಲೆಯಾಗಿ 1 ತಿಂಗಳ ಕಳೆದರೂ 5 ಜನ ಆರೋಪಿಗಳಲ್ಲಿ 4 ಜನರನ್ನು ಇನ್ನೂ ಬಂಧಿಸಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಿರುವ ಕ್ರಮಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ತನಿಖೆ ಚುರುಕುಗೊಳಿಸಿ ನ್ಯಾಯ ಒದಗಿಸಬೇಕು” ಎಂದು ಪರೇಶ ಮೇಸ್ತಾನ ತಂದೆ ಕಮಲಾಕರ ಮೇಸ್ತಾ ಆಗ್ರಹಿಸಿದರು. ಸಂಘ ಪರಿವಾರದವರು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ರಾಜು ಭಂಡಾರಿ ಮಾತನಾಡಿ, “ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಬಗ್ಗೆ ಯಾರೂ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಪರೇಶನ ಕುಟುಂಬದವರಿಗೆ ನೌಕರಿ ಕೊಡುತ್ತೇವೆ ಎಂದವರು ಈಗ ಯಾವುದೇ ರೀತಿಯಲ್ಲೂ ಕ್ರಮ ತೆಗೆದುಕೊಂಡಿಲ್ಲ” ಎಂದು ಆಕ್ಷೇಪಿಸಿದರು.

ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ, “5 ಲಕ್ಷ ರೂ ಪರಿಹಾರವನ್ನು ಜನವರಿ 10ರಂದು ನೀಡಿದ್ದು ತಕ್ಷಣ ಕೊಡುವಂಥ ಅದನ್ನು ನೀಡಲು 1 ತಿಂಗಳು ಬೇಕಾಯಿತಾ ?” ಎಂದು ಪ್ರಶ್ನಿಸಿದರು. “ಗೃಹ ಸಚಿವ ರಾಮಲಿಂಗ ರೆಡ್ಡಿಯವರು ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಮಾಧ್ಯಮದ ಮೂಲಕ ಹೇಳಿಕೆ ನೀಡಿರುವುದನ್ನು ಬಿಟ್ಟರೆ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ. ಸಾಕ್ಷಿಗಳನ್ನು ನಾಶ ಮಾಡಿ ವಹಿಸುತ್ತಾರೆ ಎಂಬ ಶಂಕೆ ಮೂಡಿದೆ” ಎಂದರು.

ಮುಖಂಡ ಶಿವರಾಜ ಮೇಸ್ತ ಮಾತನಾಡಿ, “ಪರೇಶ ಮೇಸ್ತಾನ ಸಾವಿನ ನಂತರ ಮೃತದೇಹ ಸಾಗಿಸುವಾಗ ಜಿಲ್ಲಾಧಿಕಾರಿಗಳು ಶಾಂತಿ ಕಾಪಾಡುವಂತೆ ವಿನಂತಿಸಿದ್ದರು. ಪರೇಶನ ಸಾವಿನ ಅನ್ಯಾಯಕ್ಕೆ ಸೂಕ್ತ ತನಿಖೆ ಮಾಡುತ್ತೇವೆ. ಜಿಲ್ಲಾಡಳಿತದಿಂದ ಕೇವಲ 5 ಲಕ್ಷ ರೂಪಾಯಿವರೆಗೆ ಮಾತ್ರ ಪರಿಹಾರ ಕೊಡಲು ಅಧಿಕಾರವಿದ್ದು, ಸರ್ಕಾರಕ್ಕೆ ಬರೆದು ಹೆಚ್ಚಿನ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಜನರು ಶಾಂತಿಯಿಂದ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿ ತಿಂಗಳಾದರೂ ಸಿಗುವ ಲಕ್ಷಣ ಕಾಣುತ್ತಿಲ್ಲ. ಚುನಾವಣೆ ತನಕ ತನಿಖೆ ನಡೆಯಬಾರದು ಎಂದು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಶಂಕೆ ಮೂಡುತ್ತಿದೆ. 4 ಜನ ಆರೋಪಿಗಳನ್ನು ಇನ್ನೂ ಹಿಡಿಯುವ ಲಕ್ಷಣ ಕಾಣುತ್ತಿಲ್ಲ. ಅವರನ್ನು ಹಿಡಿದು ತನಿಖೆ ಮಾಡಬೇಕು. ಹೊನ್ನಾವರ ಬೂದಿ ಮುಚ್ಚಿದ ಕೆಂಡದಂತಿದ್ದು ರಾಜಕೀಯ ಪ್ರೇರಿತವಾಗಿ ಆರೋಪಿಗಳಿಗೆ ರಕ್ಷಣೆ ನೀಡಿದರೆ, ತನಿಖೆಯ ದಿಕ್ಕು ತಪ್ಪಿಸಿದರೆ ಹೊನ್ನಾವರದ ಜನ ಸುಮ್ಮನಿಳಿಯುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಯಲಿದೆ” ಎಂದು ಎಚ್ಚರಿಸಿದರು.

ಮೀನುಗಾರರ ಮುಖಂಡ ಉಮೇಶ ಮೇಸ್ತ ಮಾತನಾಡಿ, “ಡಿಸೆಂಬರ್ 6ನೇ ತಾರೀಖಿನಂದು ಪರೇಶ ನಾಪತ್ತೆಯಾಗಿದ್ದಾನೆ. ಹುಡುಕಿಕೊಡಿ ಎಂದು ಕೇಳಿದ್ದೆವು. ಆದರೆ ಪೋಲಿಸರು ಏಕಾಏಕಿ ಸಾವಿರ ಸಂಖ್ಯೆಯಲ್ಲಿ ಬಂದೋಬಸ್ತಿಗೆ ಬಂದಿದ್ದನ್ನು ನೋಡಿದರೆ ಕೊಲೆ ಆಗಿದೆ ಎಂದು ಅವರಿಗೆ ಮೊದಲೇ ಗೊತ್ತಿತ್ತು ಎಂದು ಆಗಿಲ್ಲವೇ ?” ಎಂದು ಪ್ರಶ್ನಿಸಿದ ಅವರು, “ಸಿಪಿಐ ಕುಮಾರಸ್ವಾಮಿ ತಲವಾರು ಹಿಡಿದು ಓಡಾಡಿದವರನ್ನು ನಿಯಂತ್ರಿಸದೇ ಸಹಕಾರ ನೀಡಿದ್ದಾರೆ” ಎಂದು ಆರೋಪಿಸಿದರು.

ರಘು ಪೈ ಮಾತನಾಡಿ, “ಮಂಗಳೂರಿನಲ್ಲಿ ಘಟನೆ ಯಾದಾಗ ತಕ್ಷಣ ಸರ್ಕಾರ 10-15 ಲಕ್ಷ ರೂ ಪರಿಹಾರ ಕೊಡುತ್ತದೆ. ಮುಖ್ಯಮಂತ್ರಿ ಬಂದು ಭೇಟಿ ಆಗುತ್ತಾರೆ. ಆದರೆ ಹೊನ್ನಾವರದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ. ಸರ್ಕಾರ ಈ ತಾರತಮ್ಯ ಏಕೆ ಮಾಡುತ್ತಿದೆ ? 5 ಲಕ್ಷ ರೂ ಪರಿಹಾರ ಕೊಟ್ಟು ನಂತರ 5 ಲಕ್ಷ ರೂ ಕೊಡುತ್ತೇವೆ ಅಂದರೆ ಇದು ಯಾವ ರೀತಿ ನ್ಯಾಯ ?” ಎಂದು ಪ್ರಶ್ನಿಸಿದ ಅವರು, ಇದೇ ರೀತಿ ಮಂದುವರಿದರೆ ಶಾಂತಿಯುತವಾಗಿ ಪ್ರತಿಭಟನೆ ಪ್ರಾರಂಭ ಮಾಡುತ್ತೇವೆ ಎಂದು ಎಚ್ಚರಿಸಿದರು.

ಉಮೇಶ ಸಾರಂಗ ಮಾತನಾಡಿ, “ಶನೈಶ್ಚರ ದೇವಸ್ಥಾನದ ಸೀಸಿಟೀವಿ ಏಕೆ ಬಂದ್ ಮಾಡಿದ್ದರು ? ಗೋಲ್ಡನ್ ಜ್ಯುವೆಲರ್ಸ್ ಎದುರೇ ಘಟನೆ ನಡೆದಿದೆ. ಆದರೆ ಡಿಸೆಂಬರ್ 6ರಂದು 6 ಗಂಟೆಗೆ ಸೀಸಿಟೀವಿಯನ್ನು ಏಕೆ ಬಂದ್ ಇಟ್ಟಿದ್ದರು. ಅವರನ್ನು ವಿಚಾರಣೆಗೊಳಪಡಿಸಬೇಕು” ಎಂದು ಆಗ್ರಹಿಸಿದರು.

ರಾಜೇಂದ್ರ ಪ್ರಭು ಮಾತನಾಡಿ, “ಪೊಲೀಸರು ದಾರಿ ಮೇಲೆ ಓಡಾಡುವವರ ಚೀಲವನ್ನೂ ಚೆಕ್ ಮಾಡಿ ಬಿಡುತ್ತಿದ್ದರು. ಅಷ್ಟು ಪೊಲೀಸ್ ಬಂದೋಬಸ್ತ್ ಇರುವಾಗ ಪೊಲೀಸರ ಶಾಮೀಲು ಇಲ್ಲದೇ ಕೆರೆಯಲ್ಲಿ ಶವ ಹಾಕಲು ಸಾಧ್ಯವೇ ಎಂಬ ಶಂಕೆ ಮೂಡಿದೆ” ಎಂದರು. ಶ್ರೀಧರ ಮೇಸ್ತ, ಗೇರುಸೊಪ್ಪಾದ ಮಂಜುನಾಥ ನಾಯ್ಕ, ವಿಜು ಕಾಮತ, ಸಂಜು ಶೇಟ್, ಮುರಳಿ ಗಾಯತೊಂಡೆ ಮತ್ತಿತರರಿದ್ದರು.

 

 

LEAVE A REPLY