ಗ್ರಾಹಕರ ದೂರು ಕೇಳದಿದ್ದರೆ ಮೆಸ್ಕಾಂಗೆ ದಂಡ

ಲಾಭಬಡುಕ ಆಸ್ಪತ್ರೆಗೆ ಸಬ್ಸಿಡಿ ಬೇಡ, ವಿದ್ಯುತ್ ದರ ಇಳಿಸಲು ರೈತರ ಆಗ್ರಹ

ವಿದ್ಯುತ್ ನಿಯಂತ್ರಣ ಆಯೋಗ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗ್ರಾಹಕರ ಅಹವಾಲುಗಳನ್ನು ಆಲಿಸಲು ವಿಫಲವಾದರೆ, ಹೆಚ್ಚಿನ ಪ್ರಮಾಣದ ದೂರಗಳು ಬಂದಾಗ ವಿದ್ಯುತ್ ಸರಬರಾಜು ಕಂಪೆನಿಗಳ (ಎಸ್ಕಾಂ) ಅಧಿಕಾರಿಗಳ ಮೇಲೆ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ ಕೆ ಶಂಕರಲಿಂಗೇಗೌಡ ಹೇಳಿದ್ದಾರೆ.

ಅವರು ಮಂಗಳೂರಿನಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿ ಕರಾವಳಿ ಮತ್ತು ಮಲೆನಾಡಿನ ನಾಲ್ಕು ಜಿಲ್ಲೆಗಳ ಮೆಸ್ಕಾಂ ಗ್ರಾಹಕರ ಅಹವಾಲು ಸಭೆಯಲ್ಲಿ ಈ ಹೇಳಿಕೆ ನೀಡಿದರು. ಮುಂದಿನ ವಿದ್ಯುತ್ ದರ ಪರಿಷ್ಕರಣೆ ಆದೇಶ ನೀಡುವಾಗ ದಂಡ ಹಾಕುವ ವಿಧಿವಿಧಾನ ಪ್ರಕಟಿಸಲಾಗುವುದು ಎಂದು ಶಂಕರಲಿಂಗೇಗೌಡ ಪ್ರಕಟಿಸಿದ್ದಾರೆ.

ದಂಡ ವಿಧಿಸಿ ಆಗ ನಮ್ಮ ಎಂಜಿನಿಯರುಗಳಿಗೆ ಬುದ್ಧಿ ಬರುವುದು ಎಂದು ಮೆಸ್ಕಾಂ ಎಂಡಿ ಆಯೋಗದ ನಿರ್ಧಾರವನ್ನು ಸ್ವಾಗತಿಸಿದಾಗ, “ನಿಮ್ಮ ಮೇಲೂ ದಂಡ ವಿಧಿಸಲಾಗುವುದು” ಎಂದು ಶಂಕರಲಿಂಗೇಗೌಡ ಹೇಳಿದರು.

ಕರಾವಳಿಯಲ್ಲು ಬರಗಾಲದ ಪರಿಸ್ಥಿತಿ, ಖರ್ಚಿಗಿಂತ ಹೆಚ್ಚು ಆದಾಯ ಹೊಂದಿರುವ ಮೆಸ್ಕಾಂ, ಎಸ್ಕಾಂಗಳಿಂದ ನೂರಾರು ಕೋಟಿ ವಸೂಲಿ ಬಾಕಿ, ಸೇವೆಯಲ್ಲಿ ಗುಣಮಟ್ಟದ ಕೊರತೆ, ಸರಿಯಾದ ಲೆಕ್ಕಪತ್ರ ನೀಡದಿರುವುದು, ಇತರ ಎಸ್ಕಾಂಗಳ ರೀತಿಯಲ್ಲೇ, ಅದೇ ಪ್ರಮಾಣದ ದರ ಏರಿಕೆ ಕೇಳಿರುವುದು, ಅನರ್ಹರಿಗೆ ಸಹಾಯಧನ ನೀಡಿಕೆ, ಸೋರಿಕೆ ನಿಯಂತ್ರಣವಾದರೂ ಆದಾಯದಲ್ಲಿ ಏರಿಕೆ ಆಗದಿರುವುದು ಇತ್ಯಾದಿ ಹಲವು ಕಾರಣಗಳಿಗಾಗಿ ಈ ಬಾರಿ ವಿದ್ಯುತ್ ದರ ಏರಿಕೆ ಮಾಡಬಾರದಾಗಿ ರೈತ ಸಂಘಟನೆಗಳ ಮುಖಂಡರು, ರೈತರು, ಇತರ ಗ್ರಾಹಕರು ಆಯೋಗವನ್ನು ಒತ್ತಾಯಿಸಿದರು.

“ಈ ಬಾರಿ ಮೆಸ್ಕಾಂದ ವ್ಯಾಪ್ತಿಯಲ್ಲಿ ವಿದ್ಯುತ್ ದರ ಇಳಿಕೆ ಮಾಡಿ ಆದೇಶ ನೀಡಿ” ಎಂದು ಉಡುಪಿಯ ಬಿ ವಿ ಪೂಜಾರಿ ಮತ್ತು ಶ್ರೀನಿವಾಸ ಭಟ್ ಅವರು ಆಯೋಗವನ್ನು ಒತ್ತಾಯಿಸಿದರು.

“ಅರ್ಹರಾದ ಅಭಯಾಶ್ರಮ, ಅಂಧರ ಶಾಲೆ, ವಸತಿ ನಿಲಯಗಳಿಗೆ ರಿಯಾಯಿತಿ ನೀಡಿ. ಆದರೆ, ಯಾವುದೇ ಕಾರಣಕ್ಕಾಗಿ ದೊಡ್ಡ ಪ್ರಮಾಣದ ಲಾಭ ಮಾಡಲೆಂದೇ ಹುಟ್ಟಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬಾರದು. ಇವೆರೆಡು ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಲಾಭ ಮಾಡಲಾಗುತ್ತಿದೆ. ಇವರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಿ ಬೇರೆಯವರಿಗೆ ಹೊರೆ ಮಾಡುವುದು ಸರಿಯಲ್ಲ” ಎಂದು ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದರು.

ಹತ್ತು ಸಾವಿರ ರೂ ದಂಡ

“ಘಟ್ಟದ ಮೇಲಿನ ರೈತರ ಐಪಿ ಸೆಟ್ಟುಗಳಿಗೆ ಅಕ್ರಮ ಸಕ್ರಮ ಹೆಸರಿನಲ್ಲಿ ಹತ್ತು ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ನೀರಿನ ಪಂಪ್ ಸೆಟ್ ಸಕ್ರಮ ಮಾಡಲಾಗುತ್ತದೆ. ಕರಾವಳಿಯ ರೈತರು ನಿಯಮ ಪ್ರಕಾರವೇ ವಿದ್ಯುತ್ ಸಂಪರ್ಕ ಕೋರಿಕೆ ಸಲ್ಲಿಸಿದರೆ, ಅಕ್ರಮ ಮಾಡದಿದ್ದರೂ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹತ್ತು ಸಾವಿರ ರೂಪಾಯಿ ದಂಡ ವಸೂಲು ಮಾಡುವುದು ನ್ಯಾಯಯುತವಲ್ಲ” ಎಂದು ಸಭೆಯಲ್ಲಿ ಬಹುತೇಕ ರೈತರ ಆಗ್ರಹವಾಗಿತ್ತು.

ರೈತರ ಈ ಬೇಡಿಕೆಗೆ ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕನಂಜಪ್ಪ ಸಮಂಜಸ ಉತ್ತರ ನೀಡದೆ ಜಾರಿಕೊಂಡರು.

ಸರಕಾರದಿಂದ ಬರಬೇಕಾದ ಸಹಾಯಧನ ಬಾಕಿ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಬರಬೇಕಾದ ಬೀದಿ ದೀಪ ಮತ್ತು ಕುಡಿಯುವ ನೀರಿನ ಬಿಲ್, ಇತರ ಎಸ್ಕಾಂಗಳು ನೀಡಬೇಕಾಗಿರುವ ಬಾಕಿ ಏಳು ನೂರು ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದ್ದು, ಇದನ್ನು ವಸೂಲು ಮಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಸದ್ಯ ಏಳುನೂರು ಕೋಟಿ ರೂಪಾಯಿ ಮೆಸ್ಕಾಂನ ಕ್ರೋಢಿಕೃತ ನಷ್ಟವನ್ನು ನೀಗಿಸಿ ಮಿಗತೆ ಹಣ ಇಳಿಕೆ ಆಗಲಿದೆ ಎಂದು ಗ್ರಾಹಕರು ಮೆಸ್ಕಾಂ ಆಡಳಿತಾಧಿಕಾರಿಗಳ ಲೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

“ಕೃಷಿ ನೀರಾವರಿಯ ಹತ್ತು ವರ್ಷಗಳ ಹಳೆಯ ಬಿಲ್ ಈಗ ನೀಡುವುದು ಬೇಡ. ಹಳೇ ಬಾಕಿ ವಸೂಲು ನಿಲ್ಲಿಸಿ. ಅನಂತರ ಬಿಲ್ ಉತ್ತಮ ಮುದ್ರಣವಿರುವ ಉತ್ತಮ ಕಾಗದದಲ್ಲಿ ನೀಡಿ. ಬಿಲ್ಲಿನಲ್ಲಿಯೇ ಅಗತ್ಯ ಮಾಹಿತಿಗಳನ್ನು ನೀಡಿ, ಕೃಷಿ ನೀರಾವರಿ ವಿದ್ಯುತ್ ಬಳಕೆಗೆ ಸಂಬಂಧಿಸಿ ಮೆಸ್ಕಾಂ ಅಧ್ಯಯನ ನಡೆಸಬೇಕು. ರೈತರ ವಿದ್ಯುತ್ ಬಳಕೆಯ ಮಾಹಿತಿ ಪಡೆಯುವುದರಿಂದ ವಿದ್ಯುತ್ ಉಳಿತಾಯ ಆಗಲಿದೆ” ಎಂದು ಉಡುಪಿ ರಾಮಕೃಷ್ಣ ಶರ್ಮಾ ಹೇಳಿದರು.

ಕಡೂರು, ಶಿಕಾರಿಪುರ ಉಪವಿಭಾಗ ಹೊರತುಪಡಿಸಿ ಇತರ ಭಾಗದಲ್ಲಿ ಎಸ್ಕಾಂ ಸೇವೆ ಗುಣಮಟ್ಟ ಸುಧಾರಣೆ ಆಗುತ್ತಿದೆ. ದಶಕಗಳಿಂದ ಒಂದೇ ಕಡೆ ಇರುವವರ ಎತ್ತಂಗಡಿ ಆಗಬೇಕಾಗಿದೆ ಎಂದು ಹಲವು ಗ್ರಾಹಕರು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮೆಸ್ಕಾಂ ಎಂಡಿ ಅವರು ಒಬ್ಬ ಲೈನ್ ಮ್ಯಾನನ್ನು ವರ್ಗಾವಣೆ ಮಾಡಿದರೂ ಆತ ಸಚಿವರಿಂದ ಶಿಫಾರಸು ತಂದು ವರ್ಗಾವಣೆ ಕ್ಯಾನ್ಸಲ್ ಮಾಡುತ್ತಾನೆ. ಶಿವಮೊಗ್ಗದ ಕೆಲವು ಕಚೇರಿಗಳಲ್ಲಿ ಹಲವು ದಶಕಗಳಿಂದ ಸಿಬ್ಬಂದಿ ವರ್ಗಾವಣೆ ಆಗಿಲ್ಲ. ಈ ನಿಟ್ಟಿನಲ್ಲಿ ಆಯೋಗ ಕೂಡ ಗಮನ ಹರಿಸಬೇಕು ಎಂದು ನುಡಿದರು.