ಫ್ಯೂಸ್ ತೆಗೆಯಲು ಹೋದ ಮೆಸ್ಕಾಂ ಸಿಬ್ಬಂದಿಗೆ ಬೆದರಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೆಸ್ಕಾಂ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಫ್ಯೂಸ್ ತೆಗೆಯಲು ಮನೆಗೆ ತೆರಳಿದ ಮೆಸ್ಕಾಂ ಸಿಬ್ಬಂದಿ ಮೇಲೆ ಹರಿಹಾಯ್ದ ಗ್ರಾಹಕರೊಬ್ಬರು, ಫ್ಯೂಸ್ ತೆಗೆದರೆ ಜೀವ ಸಹಿತ ಉಳಿಸಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ.

ಸರಕಾರಿ ಇಲಾಖೆ ನೌಕರಿಗೆ ಕೆಲಸ ಮಾಡಲು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಇದೀಗ ಆರೋಪಿ ವಿರುದ್ಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 13ರಂದು ಸೋಮೇಶ್ವರ ಗ್ರಾಮದ ಸರಸ್ವತಿ ಕಾಲೊನಿ ಎಂಬಲ್ಲಿನ ರವಿರಾಜ ಎಂಬವರ ಮನೆಯ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಉಳ್ಳಾಲ ಮೆಸ್ಕಾಂ ಇಲಾಖೆ ಲೈನ್ ಮ್ಯಾನ್ ಶಿವರಾಜ ಅವರು ಇಲ್ಲಿನ ಅಸಿಸ್ಟೆಂಟ್ ಇಂಜಿನಿಯರ್ ಆದೇಶದಂತೆ ಫ್ಯೂಸ್ ತೆಗೆಯಲು ರವಿರಾಜರ ಮನೆಗೆ ಹೋಗಿದ್ದರು.

ರವಿರಾಜ ಅವರು ಸರಕಾರಿ ನೌಕರ ಎಂದು ಗೊತ್ತಿದ್ದರೂ ಕೂಡಾ ಇವರ ಕರ್ತವ್ಯಕ್ಕೆ ಅಡ್ಡಿ ಮಾಡಿ ಕೈಯಿಂದ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ಇನ್ಮೇಲೆ ಯಾರಾದರೂ ಕೂಡಾ ಸರಸ್ವತಿ ಕಾಲೊನಿಗೆ ಬಂದರೆ ಕೈಕಾಲು ಮುರಿದು ಹಾಕುವುದಾಗಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ರವಿರಾಜ ದೂರು ನೀಡಿದ್ದಾರೆ.