ಬಿಲ್ ಪಾವತಿಸದ ಕಾರಣ ಫ್ಯೂಸ್ ತೆಗೆಯಲು ಹೋದ ಮೆಸ್ಕಾಂ ಅಧಿಕಾರಿಗೆ ಜೀವ ಬೆದರಿಕೆ

ಆರೋಪಿ ವಿರುದ್ಧ ದೂರು ದಾಖಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಮೆಸ್ಕಾಂ ಕಿರಿಯ ಅಭಿಯಂತರರೊಬ್ಬರಿಗೆ ಗ್ರಾಮ ಪಂಚಾಯತ್ ಸದಸ್ಯರೇ ಜೀವ ಬೆದರಿಕೆಯೊಡ್ಡಿದ್ದಾರೆ.

ವಿದ್ಯುತ್ ಶುಲ್ಕ ಪಾವತಿಸದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ತೆಗೆಯಲೆಂದು ಮನೆಗೆ ತೆರಳಿದ್ದ ಸಂದರ್ಭ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಅಧಿಕಾರಿ ಕೊಣಾಜೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯ ನಂದರಾಜ್ ಶೆಟ್ಟಿ ಬೆದರಿಕೆಯೊಡ್ಡಿದ ಆರೋಪಿ. ಇವರಿಗೆ ನಡುಪದವು ಇಂಜಿನಿಯರಿಂಗ್ ಕಾಲೇಜಿನ ಬಳಿ ಲಾಡ್ಜೊಂದು ಇದ್ದು, ಇದರ ವಿದ್ಯುತ್ ಬಿಲ್ ಪಾವತಿಸರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಲ್ ಪಾವತಿಸುವಂತೆ ಈ ಹಿಂದೆ ಅವರಿಗೆ ಹಲವು ಬಾರಿ ಕಚೇರಿಯಿಂದಲೂ ದೂರವಾಣಿ ಕರೆ ಮಾಡಿ ತಿಳಿಸಲಾಗಿತ್ತು. ಆದರೆ ಬಿಲ್ ವಾಪತಿಸದೇ ಇದ್ದ

ಕಾರಣ ಗುರುವಾರದಂದು ಮೆಸ್ಕಾಂನ ಮಿಥುನ್ ರಾಜ್ ಎಂಬ ಸಹೋದ್ಯೋಗಿ ಜೊತೆಗೆ ಅಲ್ಲಿಗೆ ತೆರಳಿ ವಿದ್ಯುತ್ ಕಡಿತಗೊಳಿಸಲು ಮುಂದಾದಾಗ ಆಕ್ರೋಶಗೊಂಡ ಆರೋಪಿ ಮಿಥುನ್ ರಾಜ್ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ವಿದ್ಯುತ್ ಕಡಿತಗೊಳಿಸಿದರೆ ಕೈಕಾಲು ಮುರಿದು ಹಾಕವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಕಿನಲ್ಲಿ ತೆರಳಿದ ಮಿಥುನ್ ರಾಜ್ ಅರ್ಕಾನ ಬಳಿ ಮುಟ್ಟಿದಾಗ ಇವರನ್ನು ಹಿಂಬಾಲಿಸಿಕೊಂಡು ಕಾರಿನಲ್ಲಿ ಆಗಮಿಸಿದ ಆರೋಪಿ ಬೈಕಿಗೆ ಡಿಕ್ಕಿ ಹೊಡೆಸಿ, ಮತ್ತೆ ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.