ನದಿಗೆ ಹಾರಿ ಮೆಸ್ಕಾಂ ಅಧಿಕಾರಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆ ಮೇಲ್ಭಾಗದಿಂದ ನದಿಗೆ ಹಾರಿ ಹಿರಿಯ ಮೆಸ್ಕಾಂ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿರ್ವದ ಮೆಸ್ಕಾಂ ಇಲಾಖೆಯಲ್ಲಿ ಸೆಕ್ಷನ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಗರದ ಅತ್ತಾವರದ ನಿವಾಸಿ ರಹ್ಮಾನ್ (58) ಆತ್ಮಹತ್ಯೆಗೆ ಶರಣಾದವರು. ಶಿರ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕೆಲವು ಸಮಯಗಳ ಹಿಂದೆ ಮಂಗಳೂರಿಗೆ ವರ್ಗಾವಣೆಗೊಂಡಿದ್ದರು. ವಾರದ ಕೊನೆಯಲ್ಲಿ ಅತ್ತಾವರದಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದ ಇವರು ಶನಿವಾರವೂ ಬಂದಿದ್ದರು. ಸೋಮವಾರ ಮುಂಜಾನೆ ಉಡುಪಿಗೆ ತೆರಳಿದ್ದ ಇವರು ಗುರುವಾರ ಮಧ್ಯಾಹ್ನದ ಸುಮಾರಿಗೆ ಬಸ್ಸಿನಲ್ಲಿ ಬಂದು ಸೇತುವೆ ಬಳಿ ತೆರಳಿ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾರ್ವಜನಿಕರು, ವಾಹನ ಸವಾರರು ನೋಡುತ್ತಿದ್ದಂತೆ ಇವರು ನದಿಗೆ ಹಾರಿದ್ದು, ಕೂಡಲೇ ಮೇಲ್ಭಾಗದಲ್ಲಿದ್ದವರು ಬೊಬ್ಬೆ ಹೊಡೆದಿದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದವರು ರೆಹ್ಮಾನ್ ನದಿಗೆ ಹಾರಿದ ಜಾಗದಲ್ಲಿ ದೋಣಿಯಲ್ಲಿ ಬಂದು ಸುಮಾರು ಒಂದು ತಾಸಿನವರೆಗೂ ಕಾರ್ಯಚರಣೆ ನಡೆಸಿ ಕೊನೆಗೆ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ.

ಸೋಮವಾರವಷ್ಟೇ ಇವರು ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೆ ಇವರು ಗುರುವಾರ ಮಂಗಳೂರಿಗೆ ಬಂದ ವಿಷಯವೂ ಮನೆ ಮಂದಿಗೆ ಗೊತ್ತಿಲ್ಲ. ರಹ್ಮಾನ್ ಅವರ ಪುತ್ರಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಮುಂದಿನ ಎಪ್ರಿಲಿನಲ್ಲಿ ಇವರ ವಿವಾಹ ನಿಶ್ಚಯವಾಗಿದೆ. ಪುತ್ರ ನಗರದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಂ ಉಂಟಾಯಿತು. ಬಳಿಕ ಆಗಮಿಸಿದ ಪೊಲೀಸರು ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟರು.