ಮೆಸ್ಕಾಂ ಗುತ್ತಿಗೆ ಕಾರ್ಮಿಕರಿಂದ ನಗರದಲ್ಲಿ ಪ್ರತಿಭಟನಾ ಪ್ರದರ್ಶನ

ಮಂಗಳೂರು : ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಇತ್ತೀಚೆಗೆ ದೇಶದ ಸರ್ವೋಚ್ಛ ನ್ಯಾಯಾಲಯವು ಚಾರಿತ್ರಿಕ ತೀರ್ಪು ನೀಡಿದ್ದು, ಅದನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಸಿಐಟಿಯುಗೆ ಸಂಯೋಜಿತಗೊಂಡಿರುವ ಮೆಸ್ಕಾಂ ಗುತ್ತಿಗೆ ನೌಕರರು ನಿನ್ನೆ ಬಿಜೈನಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ  ನಡೆಸಿದರು.

200ಕ್ಕೂ ಮಿಕ್ಕಿದ ಮೆಸ್ಕಾಂ ಗುತ್ತಿಗೆ ಕಾರ್ಮಿಕರನ್ನುದ್ದೇಶಿಸಿ ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ, ಸುಪ್ರೀಂ ಕೋರ್ಟ್ ತೀರ್ಪು ಜಾರಿ ಆಗುವವರೆಗೆ ಗುತ್ತಿಗೆ ಕಾರ್ಮಿಕರು ಇನ್ನಷ್ಟು ತೀವ್ರ ರೀತಿಯ ಹೋರಾಟಗಳಿಗೆ ಮುಂದಾಗಬೇಕೆಂದು ಹೇಳಿದರು.

ಸಿಐಟಿಯು ದ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಗುತ್ತಿಗೆ ಕಾರ್ಮಿಕರ ಬವಣೆಗಳನ್ನು ವಿವರಿಸುತ್ತಾ “ಗುತ್ತಿಗೆ ಕಾರ್ಮಿಕರನ್ನು ಖಾಯಂ ಕಾರ್ಮಿಕರಿಗಿಂತಲೂ ಜಾಸ್ತಿ ದುಡಿಸುವ ಮೂಲಕ ವಿಪರೀತ ಶೋಷಣೆ ನಡೆಯುತ್ತಿದ್ದರೂ ಅವರಿಗೆ ನಿಕೃಷ್ಟವಾದ ಕೂಲಿ ನೀಡಲಾಗುತ್ತಿದೆ. ತೀವ್ರತರವಾದ ಬೆಲೆ ಏರಿಕೆಯಿಂದ ಸಾಮಾನ್ಯ ಜನ ಕಂಗೆಟ್ಟಿದ್ದು ಗುತ್ತಿಗೆ ಕಾರ್ಮಿಕರ ಸಂಕಷ್ಟ ಹೇಳತೀರದಾಗಿದೆ. ಅಂತಹುದರಲ್ಲಿ ಕನಿಷ್ಟ ಕೂಲಿಗಾಗಿ ಆಗ್ರಹಿಸಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ದಿವ್ಯ ಮೌನ ವಹಿಸಿದೆ” ಎಂದು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, “ಕಳೆದ 2 ವರ್ಷಗಳಿಂದ ದುಡಿಯುತ್ತಿರುವ ಮೆಸ್ಕಾಂ ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನವಿಲ್ಲ. ವೇತನದಲ್ಲಿ ತಾರತಮ್ಯ ಎಸಗಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಹಲವು ಮಂದಿ ಕಾರ್ಮಿಕರಿಗೆ ಮುನ್ಸೂಚನೆ ನೀಡದೆಯೇ ಕೆಲಸದಿಂದ ವಜಾಮಾಡಲಾಗಿದೆ. ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ಗುರುತು ಚೀಟಿಯನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿದ್ದು ಇದಕ್ಕೆ ಮೆಸ್ಕಾಂ ಆಡಳಿತ ಮಂಡಳಿಯು ನೇರ ಹೊಣೆಯಾಗಿದೆ. ಮೆಸ್ಕಾಂ ಸಂಸ್ಥೆಯ ಶ್ರೇಯೋಭಿವೃದ್ದಿಗಾಗಿ ಗುತ್ತಿಗೆ ಕಾರ್ಮಿಕರು ಅವಿಶ್ರಾಂತವಾಗಿ ದುಡಿಯುತ್ತಿದ್ದರೂ ಮೆಸ್ಕಾಂ ಮಾತ್ರ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿರುವುದು ತೀರಾ ಖೇದಕರ ಸಂಗತಿಯಾಗಿದೆ” ಎಂದು ಹೇಳಿದರು.

ಹೋರಾಟದ ನೇತೃತ್ವವನ್ನು ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘಟನೆಯ ಜಿಲ್ಲಾ  ಸಂಘಟನೆಯ ಕಾರ್ಯದರ್ಶಿ ಮಹೇಶ್ ಸಂಘಟನೆಯ ಜಿಲ್ಲಾ ಮುಖಂಡರಾದ ಸುರೇಶ್ ಎಚ್, ಲೋಕೇಶ್ ಹೆಬ್ಬಾರ್, ಪ್ರಕಾಶ, ಕರುಣಾಕರ, ಜಯರಾಮ, ಕೇಶವ ನಾಯ್ಕ್ ಮುಂತಾದವರು ವಹಿಸಿದ್ದರು.