ಸ್ವಚ್ಛತೆಯ ಪ್ರತಿರೂಪವಾಗಿದ್ದ ಮಾನಸಿಕ ಅಸ್ವಸ್ಥೆ ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಸ್ವಚ್ಛತೆ ಬಗ್ಗೆ ಅಪಾರ ಕಾಳಜಿಹೊಂದಿದ್ದ ಮಾನಸಿಕ ಅಸ್ವಸ್ಥೆಯೋರ್ವರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟು, ಪರಿಸರ ಸ್ವಚ್ಛ ಕಾರ್ಯವನ್ನು ತನ್ನ ದಿನದ ಕಾಯಕ ಎಂಬಂತೆ ಮಾಡುತ್ತಿದ್ದ ಈ ವೃದ್ಧ ಮಹಿಳೆ ಕಳೆದೆರಡು ದಿನಗಳಿಂದ ಉಪ್ಪಿನಂಗಡಿಯಿಂದ ನಾಪತ್ತೆಯಾಗಿದ್ದಾರೆ. ದಕ್ಕೆ ಕೆಲ ವಿಕೃತ ಮನೋಸ್ಥಿತಿಯವರು ರಾತ್ರಿ ಸಮಯದಲ್ಲಿ ಇವರಿಗೆ ಉಪಟಳ ನೀಡುತ್ತಿದ್ದದ್ದೇ ಕಾರಣವೆನ್ನಲಾಗಿದೆ.

ಸುಮಾರು ಎರಡು ತಿಂಗಳ ಹಿಂದೆ ಎಲ್ಲಿಂದಲೋ ಬಂದ ಮಾನಸಿಕ ಅಸ್ವಸ್ಥ ಮಹಿಳೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ಇವರು ಮಾನಸಿಕ ಅಸ್ವಸ್ಥೆಯಾಗಿದ್ದರೂ, ಸ್ವಚ್ಛತೆಯ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ತಮ್ಮಷ್ಟಕ್ಕೆ ತಾವೇ ಹಿಂದಿ ಭಾಷೆಯಲ್ಲಿ ಗೊಣಗಿಕೊಂಡಿದ್ದ ಇವರು ಯಾರಿಗೂ ತೊಂದರೆ ನೀಡುತ್ತಿರಲಿಲ್ಲ. ಬಸ್ ನಿಲ್ದಾಣದಲ್ಲಿ ಕಸ ಬಿದ್ದಿರುವುದು ಕಂಡೊಡನೇ ಸೀದಾ ಹೋಗಿ ಅದನ್ನು ಹೆಕ್ಕಿ ಅದರಲ್ಲಿರುವ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಹಾಗೂ ಹಣ್ಣುಹಂಪಲುಗಳ ಸಿಪ್ಪೆಯನ್ನು ಬೇರ್ಪಡಿಸಿ ಗೋಣಿಚೀಲದಲ್ಲಿ ತಂಬಿಸಿಡುತ್ತಿದ್ದರು. ಬಳಿಕ ದಿನಾ ಬೆಳಗ್ಗೆ ಬರುವ ಪಂಚಾಯತ್ ತ್ಯಾಜ್ಯ ವಿಲೇವಾರಿ ಸಿಬ್ಬಂದಿಗೆ ತಾನು ವಿಂಗಡಿಸಿಟ್ಟ ಎಲ್ಲಾ ಕಸವನ್ನು ನೀಡುತ್ತಿದ್ದರು. ಉಪ್ಪಿನಂಗಡಿಯಲ್ಲಿದ್ದಷ್ಟು ದಿನ ಇದು ಅವರದ್ದು ನಿತ್ಯದ ಕೆಲಸವಾಗಿತ್ತು.

ಇವರ ಈ ಕೆಲಸ ನೋಡಿದ ಬಸ್ ನಿಲ್ದಾಣದಲ್ಲಿ ಹಣ್ಣುಹಂಪಲು, ಜೋಳಪುರಿ, ಕಡ್ಲೆಕಾಯಿ ಮಾರುವ ಹುಡುಗರಾದ ಅಶ್ರಫ್ ಅಂಬೊಟ್ಟು, ಹನೀಫ್ ಕಡವಿನಬಾಗಿಲು, ಪಕ್ರುದ್ದೀನ್ ಮಠ, ಇಬ್ರಾಹೀಂ ಪೆದಮಲೆ, ರಫೀಕ್ ಕರಾಯ, ಇಸ್ಮಾಯಿಲ್ ಕಡವಿನ ಬಾಗಿಲು ಹಾಗೂ ಅಬ್ದುಲ್ಲಾ ತೆಕ್ಕಾರು ಅವರು ದಿನವೂ ತಾವು ದುಡಿದ ಹಣದಲ್ಲಿ ಈಕೆಯ ದಿನದ ಎರಡು ಹೊತ್ತಿನ ಊಟಕ್ಕಾಗಿ ಎಲ್ಲರೂ ಹಣವನ್ನು ಒಟ್ಟುಗೂಡಿಸಿ, ಮಧ್ಯಾಹ್ನ ಹಾಗೂ ರಾತ್ರಿ ಈಕೆಗೆ ಊಟ ತಂದು ನೀಡುತ್ತಿದ್ದರು. ಅದನ್ನು ಉಣ್ಣುತ್ತಿದ್ದ ಈಕೆ ಮತ್ತೆ ಯಾರಲ್ಲೂ ಭಿಕ್ಷೆ ಕೇಳುತ್ತಿರಲಿಲ್ಲ. ಕೊಟ್ಟರೂ ತೆಗೆದುಕೊಳ್ಳುತ್ತಿರಲಿಲ್ಲ.

ಪರಿಸರದ ಸ್ವಚ್ಛತೆಯಲ್ಲದೆ ತನ್ನ ದೇಹ ಸ್ವಚ್ಛತೆಯತ್ತಲೂ ಹೆಚ್ಚಿನ ಗಮನ ನೀಡುತ್ತಿದ್ದ ಈಕೆ ಪ್ರತಿ ದಿನ ಸಮೀಪದಲ್ಲೇ ಇರುವ ನೇತ್ರಾವತಿ ನದಿಗೆ ಹೋಗಿ ಅಲ್ಲಿ ಸ್ನಾನ ಮಾಡಿ ಬರುತ್ತಿದ್ದಳು.

ಹೀಗೆ ಮಾನಸಿಕ ಅಸ್ವಸ್ಥೆಯಾದರೂ, ಪರಿಸರ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ ಕಳೆದೆರಡು ದಿನಗಳಿಂದ ಉಪ್ಪಿನಂಗಡಿ ಬಿಟ್ಟು ಹೋಗಿದ್ದಾರೆ. ಬಸ್ ನಿಲ್ದಾಣದಲ್ಲಿ ಒಂಟಿಯಾಗಿದ್ದ ಈಕೆಗೆ ಕೆಲ ವಿಕೃತರು ರಾತ್ರಿ ಉಪಟಳ ನೀಡಿದ್ದೇ ಈಕೆ ಇಲ್ಲಿಂದ ದೂರ ಹೋಗಲು ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.