ತಾ ಪಂ ಸಭೆಗೆ ಅಧಿಕಾರಿಗಳ ಗೈರು ಖಂಡಿಸಿದ ಸದಸ್ಯರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕು ಪಂಚಾಯತ್ ಸಭೆಗಳಿಗೆ ಹದಿನೈದು ದಿವಸಕ್ಕೂ ಮೊದಲೇ ದಿನ ನಿಗದಿಗೊಳಿಸಿ ನೋಟೀಸು ಜಾರಿಗೊಳಿಸಲಾಗುತ್ತಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಸಮಪರ್ಕವಾಗಿ ಹಾಜರಾಗದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವ ಬಗ್ಗೆ ಬಂಟ್ವಾಳ ತಾ ಪಂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ಸದಸ್ಯ ಹಾಜಿ ಎ ಉಸ್ಮಾನ್ ಕರೋಪಾಡಿ ಹಾಗೂ ಕೆ ಸಂಜೀವ ಪೂಜಾರಿ “ತಾ ಪಂ ಸಾಮಾನ್ಯ ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ಸಭೆಗೆ ಹಾಜರಾಗದೆ ಲಘುವಾಗಿ ಪರಿಗಣಿಸುತ್ತಿರುವುದು ಗಂಭೀರ ವಿಚಾರವಾಗಿದೆ” ಎಂದು ಹೇಳಿ  ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಅಧ್ಯಕ್ಷರನ್ನು ಒತ್ತಾಯಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.

ಇತ್ತೀಚೆಗೆ ಬಾಳ್ತಿಲ ಗ್ರಾಮದ ನೀರಪಾದೆ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಬಿಸಿಯೂಟದ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿನಿಗೆ ಶಾಲಾ ಮುಖ್ಯ ಶಿಕ್ಷಕಿ ಅವಾಚ್ಯವಾಗಿ ನಿಂದಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಶಾಲೆಯಲ್ಲೇ ಕುಸಿದುಬಿದ್ದ ಘಟನೆಗೆ ಸಂಬಂಧಿಸಿ ಕ್ರಮದ ಬಗ್ಗೆ ತಾ ಪಂ ಸದಸ್ಯರು ಸ್ಪಷ್ಟನೆ ಬಯಸಿದಾಗ ಉತ್ತರಿಸಿದ ಶಿಕ್ಷಣಾಧಿಕಾರಿ ಶಾಲೆಯಿಂದ ಶಿಕ್ಷಕಿಯನ್ನು ವರ್ಗಾಯಿಸಲಾಗಿದೆ ಎಂದುತ್ತರಿಸಿದರು. “ಶಿಕ್ಷಕಿ ಇನ್ನೂ ಶಾಲೆಯಲ್ಲೇ ಕರ್ತವ್ಯದಲ್ಲಿದ್ದಾರೆ” ಎಂದು ಜಿ ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ ಸಹಿತ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಶಿಕ್ಷಣಾಧಿಕಾರಿ, “ಈಗಾಗಲೇ ವರ್ಗಾವಣಾ ಆದೇಶ ಜಾರಿಯಾಗಿದ್ದು, ಶುಕ್ರವಾರ ಶಿಕ್ಷಕಿಯನ್ನು ಶಾಲೆಯಿಂದ ವರ್ಗಾವಣೆಗೊಳ್ಳಲಿದ್ದಾರೆ” ಎಂದು ಹೇಳಿದರು.

“ಸಂಪೂರ್ಣ ಬಯಲು ಶೌಚ ಮುಕ್ತ ಗ್ರಾಮ ಎಂಬ ಪುರಸ್ಕಾರ ಪಡೆದ ಕರೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು ಎಸ್ ಸಿ ಮನೆಗಳಿಗೆ ಇನ್ನೂ ಶೌಚಾಲಯ ವ್ಯವಸ್ಥೆ ಆಗಿಲ್ಲ. ಹೀಗಿರುತ್ತ ಬಯಲು ಶೌಚ ಮುಕ್ತ ಗ್ರಾಮ ಎಂಬ ಪುರಸ್ಕಾರ ಹೇಗೆ ಬಂತು?” ಎಂದು ಆಡಳಿತ ಪಕ್ಷದ ಸದಸ್ಯ ಹಾಹಿ ಉಸ್ಮಾನ್ ಕರೋಪಾಡಿ  ಪ್ರಶ್ನಿಸಿದರು. ಬಯಲು ಶೌಚ ಮುಕ್ತಗೊಳ್ಳದೆ ಪುರಸ್ಕಾರ ಹೇಗೆ ಬಂತು ಎಂದು ಕೇಳಿದರು. ಈ ಸಂದರ್ಭ ತಾಂತ್ರಿಕ ಸಮಸ್ಯೆಯ ಕಾರಣ ನೀಡಿ ಕಾರ್ಯನಿರ್ವಹಣಾಧಿಕಾರಿ ಚರ್ಚೆಗೆ ತೆರೆ ಎಳೆದರು.

ತಾಲೂಕಿನ ನಗರ ಪ್ರದೇಶಗಳಲ್ಲಿ ಪದೇ ಪದೇ ರಾತ್ರಿ ವೇಳೆ ವಿದ್ಯುತ್ ಕೈಕೊಡುತ್ತಿದ್ದು, ಈ ಬಗ್ಗೆ ಜನ ಸಮಸ್ಯೆ ಹೇಳಿಕೊಳ್ಳಲು ದೂರವಾಣಿ ಕರೆ ಮಾಡಿದರೆ ಕರೆ ಎತ್ತದ ಮೆಸ್ಕಾಂ ಇಂಜಿನಿರ್‍ಗಳ ವಿರುದ್ದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಟ್ಲ ಮೆಸ್ಕಾಂ ಶಾಖಾ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರವೊಂದರ ವಿದ್ಯುತ್ ಸಂಪರ್ಕವನ್ನು ಬಿಲ್ ಪಾವತಿಸಿಲ್ಲ ಎಂಬ ನೆಪವೊಡ್ಡಿ ಕಡಿತಗೊಳಿಸಿರುವ ಮೆಸ್ಕಾಂ ಕ್ರಮಕ್ಕೆ ತಾ ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಮಾಹಿತಿ ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸಿಡಿಪಿಒ ಸುಧಾ ಜೋಷಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, “ಒಂದೋ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ನೀಡಬಹುದಿತ್ತು. ಅಥವಾ ಕನಿಷ್ಠ ನಮ್ಮ ಗಮನಕ್ಕಾದರೂ ತಂದಿದ್ದರೆ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಬಹುದಿತ್ತು” ಎಂದರಲ್ಲದೆ “ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ಕೊಡುವ ಬದಲು ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾನೂನಿನ ಇತಿಮಿತಿಯಲ್ಲಿ ಜನರಿಗೆ ಸೇವೆ ಮಾಡಬೇಕು. ಜನರಿಗೆ ಸೇವೆ ಮಾಡಲು ಮನಸ್ಸಿಲ್ಲದ ಅಧಿಕಾರಿಗಳು ತಮ್ಮ ಹುದ್ದೆಯನ್ನು ತಾವಾಗಿಯೇ ತ್ಯಜಿಸುವುದೊಳಿತು” ಎಂದು ಖಾರವಾಗಿ ಪ್ರತಿಕ್ರಯಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ ಬಂಗೇರ, ಜಿ ಪಂ ಸದಸ್ಯ ರವೀಂದ್ರ ಕಂಬಳಿ, ಇಒ ಸಿಪ್ರಿಯಾನ್ ಮಿರಾಂದ ಸಭೆಯಲ್ಲಿದ್ದರು. ಸದಸ್ಯರಾದ ರಮೇಶ್ ಕುಡ್ಮೇರು, ಆದಂ ಕುಂಞÂ, ಹೈದರ್, ಮಲ್ಲಿಕಾ ಶೆಟ್ಟಿ, ಮಂಜುಳಾ ಕುಶಲ, ನವೀನ್, ಯಶವಂತ ಪೊಳಲಿ ಮೊದಲಾದವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.