ಭರದಿಂದ ಸಾಗುತ್ತಿರುವ ಮೆಲ್ಕಾರ್-ಮಾರ್ನಬೈಲ್ ಚತುಷ್ಪಥ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ರಾಜ್ಯ ಸರಕಾರದ ಅಪೆಂಡಿಕ್ಸ್ ಯೋಜನೆಯಡಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಲ್ಕಾರ್-ಮಾರ್ನಬೈಲ್ ರಸ್ತೆ ಚತುಷ್ಪಥ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೆಲ್ಕಾರ್ ಪರಿಸರ ಹೈಟೆಕ್ ಸಿಟಿಗಳಂತೆ ಕಂಗೊಳಿಸಲಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.

ಮೆಲ್ಕಾರ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪಾದಯಾತ್ರೆ ಮೂಲಕ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಹೈಟೆಕ್ ರಸ್ತೆಯಲ್ಲಿ ಫುಟ್‍ಪಾತ್, ಝೀಬ್ರಾ ಕ್ರಾಸ್ ನಿರ್ಮಿಸಲಾಗುವುದು. ರಸ್ತೆಯ ಎರಡೂ ಬದಿಗಳಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು, ರಸ್ತೆಯುದ್ದಕ್ಕೂ ಮಧ್ಯಭಾಗದಲ್ಲಿ ದಾರಿ ದೀಪಗಳನ್ನು ಅಳವಡಿಸಲಾಗುವುದು ಎಂದರು.

ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಪುರಸಭೆಗೆ ಸೇರಿದ 0.47 ಎಕ್ರೆ ಸರಕಾರಿ ಜಮೀನಿನಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ವ್ಯವಸ್ಥೆಗಳನ್ನೊಳಗೊಂಡ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಪುತ್ತೂರು ಸರಕಾರಿ ಬಸ್ ನಿಲ್ದಾಣದ ನಿರ್ಮಿಸಿದ ಅದೇ ಸಂಸ್ಥೆ ಬಿ ಸಿ ರೋಡು ಬಸ್ ಖಾಸಗಿ ಬಸ್ ನಿಲ್ದಾಣವನ್ನೂ ನಿರ್ಮಿಸಲು ಒಪ್ಪಿಕೊಂಡಿದೆ ಎಂದರು.

ಈಗಾಗಲೇ ಬಸ್ ನಿಲ್ದಾಣಕ್ಕೆ ಈ ಜಮೀನನ್ನು ಮೀಸಲಾಗಿರಿಸಲಾಗಿದ್ದು, ಇದರ ಪಕ್ಕದಲ್ಲಿ ಲಗ್ತಿ ಇರುವ ಪರಂಬೋಕು ಜಮೀನುಗಳನ್ನು ಕೂಡಾ ಸೇರಿಸಿಕೊಂಡು ಸರ್ವೇ ಮಾಡಿ ಗಡಿ ಗುರುತು ಮಾಡುವಂತೆ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಸೂಚಿಸಿದರು.