ಈಜುಕೊಳವಾದ ಮೆಲ್ಕಾರ್ ಹೆದ್ದಾರಿ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮೆಲ್ಕಾರ್-ಬೋಳಂಗಡಿ ರಸ್ತೆ ಈಜುಕೊಳವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕಾಗಿ ಹೆದ್ದಾರಿ ಅಗಲೀಕರಣವಾಗಿದ್ದರೂ ವಾಹನ ಸವಾರರ ನರಕಯಾತನೆ ಮಾತ್ರ ಮತ್ತಷ್ಟು ಹೆಚ್ಚಾಗಿದೆ. ಮೆಲ್ಕಾರ್ ಜಂಕ್ಷನಿಂದ ಬೋಳಂಗಡಿವರೆಗಿನ ರಸ್ತೆ ಬದಿಯ ಚರಂಡಿ ಕಾಮಗಾರಿ ಅರ್ಧದಲ್ಲೇ ನಿಂತಿರುವ ಕಾರಣ ಮಳೆ ನೀರೆಲ್ಲಾ ರಸ್ತೆಯಲ್ಲೇ ಶೇಖರಣೆಯಾಗುತ್ತಿದೆ. ಮೆಲ್ಕಾರ್ ಟ್ರಾಫಿಕ್ ಠಾಣೆಯಿಂದ ಪೆಟ್ರೋಲ್ ಪಂಪುವರೆಗಿನ ರಸ್ತೆ ಕಾಮಗಾರಿ ಸಂದರ್ಭ ಈ ಹಿಂದೆ ಇದ್ದಂತಹ ಚರಂಡಿಯನ್ನು ಮುಚ್ಚಲಾಗಿತ್ತು. ಹೊಸ ಚರಂಡಿ ವ್ಯವಸ್ಥೆ ಪೂರ್ಣವಾಗುವ ಮೊದಲೇ ಮಳೆಗಾಲ ಆರಂಭವಾದ ಕಾರಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದ್ದ ಚರಂಡಿಯನ್ನು ಮುಚ್ಚಿರುವ ಅತಿ ಬುದ್ದಿವಂತ ಇಂಜನಿಯರುಗಳ ಕರ್ಮಕಾಂಡದಿಂದಾಗಿ ಗುಡ್ಡದಿಂದ ಇಳಿದು ಬರುತ್ತಿರುವ ಕೊಚ್ಚೆ ನೀರು ಇದೀಗ ರಸ್ತೆಯಲ್ಲೇ ಶೇಖರಣೆಯಾಗುತ್ತಿದೆ. ಮಳೆ ಬಂದರೆ ಸಾಕು ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಅಧಿಕಾರಿಗಳಿಗೆ ಬೈಯುತ್ತಾ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಮಳೆ ನೀರು ಹರಿದು ಹೋಗಲು ಇದ್ದ ಚರಂಡಿಯನ್ನಾದರೂ ಸರಿಪಡಿಸಿ ಎಂಬುದು ವಾಹನ ಸವಾರರ ಒತ್ತಾಯವಾಗಿದೆ.