ಹೊಸ ಲೋಕಾಯುಕ್ತ ನಿರ್ಧರಿಸಲು ಜ 9ಕ್ಕೆ ಸಭೆ

ಬೆಂಗಳೂರು : ಕಳೆದ ಒಂದು ವರ್ಷದಿಂದ ಖಾಲಿ ಬಿದ್ದಿರುವ ಲೋಕಾಯುಕ್ತ ಹುದ್ದೆ ಕಟ್ಟಕಡೆಗೂ ಭರ್ತಿಗೊಳ್ಳುವ ಲಕ್ಷಣ ಕಂಡುಬಂದಿದೆ. ಒಂದು ಕಾಲದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತ 2015 ಡಿಸೆಂಬರಿನಿಂದ ಖಾಲಿ ಬಿದ್ದಿದೆ.

ರಾಜ್ಯ ಲೋಕಾಯುಕ್ತ ಹುದ್ದೆಗೆ ಅರ್ಹರ ಆಯ್ಕೆ ವಿಷಯದಲ್ಲಿ ಸೀಎಂ ಸಿದ್ದರಾಮಯ್ಯ ಜನವರಿ 9ರಂದು ಹೊಸದಾಗಿ ಅಧಿಕೃತರ ಸಭೆ ಕರೆದಿದ್ದಾರೆ. ಈ ಹಿಂದೆ ಇಂತಹ ಎರಡು ಪ್ರಯತ್ನ ನಡೆದಿದ್ದು, ಆ ಸಂದರ್ಭದಲ್ಲಿ ಜಸ್ಟಿಸ್ ಎಸ್ ಆರ್ ನಾಯಕರನ್ನು ಲೋಕಾಯುಕ್ತ ಹುದ್ದೆಗೆ ನಿಯುಕ್ತಿಗೊಳಿಸುವ ಪ್ರಯತ್ನ ವಿಫಲವಾಗಿತ್ತು.

ಕಳೆದ ವರ್ಷ ಮಾರ್ಚಿನಲ್ಲಿ ಭ್ರಷ್ಟಾಚಾರ ನಿಗ್ರಹ ಪಡೆ (ಎಬಿಸಿ) ರಚಿಸಲಾದ ಬಳಿಕ, ರಾಜ್ಯದಲ್ಲಿ ಲೋಕಾಯುಕ್ತದಂತಹ ಪ್ರಬಲ ಸಂಸ್ಥೆಯೊಂದನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕಿಸಿದ್ದವು.

ಸೀಎಂ ಸಹಿತ ಆಡಳಿತ ಪಕ್ಷದ ಕೆಲವಾರು ಸಚಿವರ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ನೇಮಕ ಬಗ್ಗೆ ಸರ್ಕಾರ ಹೇಳಿಕೊಳ್ಳುವ ಆಸಕ್ತಿ ಹೊಂದಿಲ್ಲ ಎಂಬ ಆರೋಪಗಳು ಬಂದಿವೆ.

ಹಿಂದೆ 1984ರಿಂದ ಕರ್ನಾಟಕ ಲೋಕಾಯುಕ್ತ ತನ್ನ ಪೊಲೀಸ್ ಬಲದೊಂದಿಗೆ ಕಾಯ್ದೆ ಮತ್ತು 198ರ ಭ್ರಷ್ಟಾಚಾರ ತಡೆ ಕಾಯ್ದೆಯಂತೆ ರಾಜ್ಯ ಲೋಕಾಯುಕ್ತ ಕಾರ್ಯ ನಡೆಸುತ್ತಿತ್ತು. ಆದರೆ ಕಳೆದ ವರ್ಷ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿ, ಎಸಿಬಿ ರಚಿಸಿದೆ. ಜಸ್ಟಿಸ್ ಭಾಸ್ಕರ್ ರಾವ್ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಪ್ರತಿಷ್ಠೆ ಮಣ್ಣುಪಾಲಾಗಿತ್ತು. ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ಅವರು, ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುವಂತಾಗಿತ್ತು.

ಪ್ರಸಕ್ತ ಈ ಹುದ್ದೆಗೆ ಮಾಜಿ ಹೈಕೋರ್ಟ್ ಜಸ್ಟಿಸ್ ಪಿ ವಿಶ್ವನಾಥ ಶೆಟ್ಟಿ ಮುಂಚೂಣಿಯಲ್ಲಿದ್ದಾರೆ. ಸ್ಪರ್ಧೆಯಲ್ಲಿ ಕರ್ನಾಟಕ ಮುಖ್ಯ ಜಸ್ಟಿಸ್ ಡಿ ಎಚ್ ವಘೇಲರ ಹೆಸರೂ ಕೇಳಿಬರುತ್ತಿದೆ.