ಆಸ್ಪತ್ರೆಗೆ ತಂದಿಟ್ಟ ಔಷಧಿ ಪೆಟ್ಟಿಗೆಗಳು ಅನಾಥ !

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಔಷಧಿಗಳನ್ನು ಆಸ್ಪತ್ರೆಯೊಳಗಿಡಲು ಸಿಬಂದಿಗಳಿಲ್ಲದೆ ಔಷಧಿ ಪೆಟ್ಟಿಗೆಗಳು ದಿನಪೂರ್ತಿ ಆಸ್ಪತ್ರೆ ಹೊರಗಡೆ ಉಳಿದುಕೊಂಡಿವೆ.

ಈ ಘಟನೆ ನಡೆದದ್ದು ಭಾನುವಾರ. ರಜಾ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಆಸ್ಪತ್ರೆ ಬೆಳಿಗ್ಗೆ 9ರಿಂದ ಸಂಜೆ 4-30ರವರೆಗೆ ಸಾರ್ವಜನಿಕ ಸೇವೆಗೆ ಲಭ್ಯವಿದ್ದರೆ ರಜಾದಿನಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಆಸ್ಪತ್ರೆ  ತೆರೆದಿರುತ್ತದೆ ಎಂದು ಆಸ್ಪತ್ರೆಯ ಗೋಡೆಯಲ್ಲಿ ಮಾಹಿತಿ ಇದೆ. ಆದರೆ ಭಾನುವಾರ ಮಧ್ಯಾಹ್ನದೊಳಗೆ ಈ ಆಸ್ಪತ್ರೆಗೆ ತಂದ ಔಷಧಿ ಬಾಕ್ಸುಗಳು ಸಂಜೆಯವರೆಗೂ ಬಾಗಿಲಿನ ಹೊರಗಡೆ ಕಾಯುತ್ತಿರುವುದನ್ನು ಕಂಡು ಸ್ಥಳಿಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಭಾನುವಾರ ದಿನಪೂರ್ತಿ ಆಸ್ಪತ್ರೆ ತೆರೆದಿಲ್ಲ ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಅವಶ್ಯವಿರುವ ಔಷಧಿಗಳನ್ನು ಪಟ್ಟಿ ಮಾಡಿ ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಿದ ನಂತರ ನಿರ್ಧಿಷ್ಟ ದಿನಗಳಲ್ಲಿ ಅವುಗಳನ್ನು ಆಸ್ಪತ್ರೆಗೆ ಸರಬರಾಜು ಮಾಡಲಾಗುತ್ತದೆ. ಆಸ್ಪತ್ರೆಯ ವೈದ್ಯರು ಅಥವಾ ಸಿಬ್ಬಂದಿ ಅವುಗಳ ಲೆಕ್ಕ ತೆಗೆದು ನಂತರ ಒಳಗಿಡಬೇಕು. ಆದರೆ ಬೆಳುವಾಯಿ ಆಸ್ಪತ್ರೆಗೆ ಬಂದ ಔಷಧಿ ಪೆಟ್ಟಿಗೆಗಳನ್ನು ಸ್ವೀಕರಿಸುವವರಿಲ್ಲದೆ ಜಗಲಿಯಲ್ಲಿ ಕಾಯುತ್ತಿದ್ದು ಇಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ.

ಇಲ್ಲಿನ ವೈದ್ಯರ ನಡವಳಿಕೆ ಬಗ್ಗೆ ಸಾರ್ವಜನಿಕರಿಂದ ಮೇಲಾಧಿಕಾರಿಗಳಿಗೆ ಅನೇಕ ದೂರುಗಳು ಹೋಗಿದ್ದು ಅವರ ವರ್ಗಾವಣೆಗೆ ಗ್ರಾಮಸಭೆಯಲ್ಲೂ ಒತ್ತಾಯ ಕೇಳಿ ಬಂದಿತ್ತು. ಸದಾ ವಿವಾದದ ಕೆಂದ್ರವಾಗಿರುವ ಈ ಆಸ್ಪತ್ರೆಯಲ್ಲಿ ಈಗ ಸಾರ್ವಜನಿಕರ ಚಿಕಿತ್ಸೆಗೆ  ಬೇಕಾಗಿರುವ ಔಷಧಿ ಬಾಕ್ಸುಗಳು ಹೊರಗಡೆ ಬಿದ್ದುಕೊಂಡಿದ್ದು ವೈದ್ಯರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.