ಶರಪಂಜರದಲ್ಲಿ ಮಾಧ್ಯಮ

ಭಾರತ ಇಂದು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿದೆ. ಭೀತಿ, ಆಕ್ರೋಶ, ಆತಂಕ, ಹತಾಶೆ ಮತ್ತು ಜಿಗುಪ್ಸೆ ಜನಸಾಮಾನ್ಯರಲ್ಲಿ ಮಡುಗಟ್ಟಿದೆ..

  • ಕೃಷ್ಣ ಪ್ರಸಾದ್

ಭಾರತದ ಮಾಧ್ಯಮ ಲೋಕ ಇಂದು ಕವಲು ಹಾದಿಯಲ್ಲಿದೆ. ಮುಖ್ಯವಾಹಿನಿ ಮಾಧ್ಯಮಗಳು ಅರೆ ಪ್ರಜ್ಞಾವಸ್ಥೆಯಲ್ಲಿದೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲೂ ಕಾಣದಂತಹ ಪರಿಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ. ತುರ್ತು ಪರಿಸ್ಥಿತಿ ಒಂದು ಘೋಷಿತ ಸನ್ನಿವೇಶ. ಮುಖಾಮುಖಿಯಾಗಿ ಪ್ರಜಾತಂತ್ರ ಮತ್ತು ಮೂಲಭೂತ ಹಕ್ಕುಗಳು ಪ್ರಭುತ್ವದ ಶಕ್ತಿಯನ್ನು ಎದುರಿಸಬೇಕಾಗಿದ್ದ ಒಂದು ಸಂದರ್ಭ. ದೇಶಾದ್ಯಂತ ಸೆನ್ಸಾರ್ಶಿಪ್ ಪತ್ರಕರ್ತರನ್ನು ಆವರಿಸಿತ್ತು. ಪ್ರಧಾನಿ ಇಂದಿರಾ ಗಾಂಧಿಯವರಿಗೆ ಇಷ್ಟವಿಲ್ಲದ ಯಾವುದಕ್ಕೂ ಉಳಿಗಾಲ ಇರಲಿಲ್ಲ. ಸುದ್ದಿ ಪತ್ರಿಕೆಗಳ ಕಚೇರಿಗಳು ಶರಪಂಜರದೊಳಗಿನ ರೆಕ್ಕೆ ಕತ್ತರಿಸಿದ ಹಕ್ಕಿಗಳಂತಿದ್ದವು. ಇಂದೂ ವಸ್ತುಶಃ ಇಂತಹುದೇ ಪರಿಸ್ಥಿತಿ ಎದುರಾಗಿದೆ. ಅದೇ ಭೀತಿ, ಅದೇ ಅತಂಕ ಮತ್ತು ಅದೇ ರೀತಿಯ ಭೀತಿಯ ವಾತಾವರಣ.

ಆದರೆ ಈ ಭೀತಿಯ ವಾತಾವರಣದ ಸೂತ್ರಧಾರರು ಅಗೋಚರರಾಗಿದ್ದಾರೆ. ಇದು ಕೇವಲ ಪತ್ರಿಕೆಗಳ ಹೆಡ್ ಲೈನ್ಸುಗಳನ್ನು ನಿಯಂತ್ರಿಸುತ್ತಿಲ್ಲ. ಒಂದು ಸೈದ್ಧಾಂತಿಕ ಪ್ರತಿಪಾದನೆಯನ್ನು ಮುಖ್ಯವಾಹಿನಿಯ ಅಭಿವ್ಯಕ್ತಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಇಂದು ಕೇವಲ ಮಾಧ್ಯಮ ಬಂಧನದಲ್ಲಿಲ್ಲ, ಭಾರತ ಎನ್ನುವ ಪರಿಕಲ್ಪನೆಯೇ ಬಂಧನಕ್ಕೊಳಗಾಗಿದೆ.

ಮಾಧ್ಯಮದ ನಿರೂಪಕರು, ಸಂಪಾದಕರು ಮತ್ತು ಮಾಲಿಕರು ಕಾಶ್ಮೀರದಲ್ಲಿ ಜೀಪ್ ಒಂದಕ್ಕೆ ಕಟ್ಟಿಹಾಕಲಾಗಿದ್ದ ಕಾಶ್ಮೀರಿ ನಾಗರಿಕನನ್ನು ಹೋಲುತ್ತಾರೆ. ಪ್ರತಿರೋಧವನ್ನು ಹತ್ತಿಕ್ಕಿ, ಸಹಮತವನ್ನು ತಯಾರಿಸಿ, ಕಾರ್ಯಸೂಚಿಗಳನ್ನು ಮಂಡಿಸಿ, ಜನಬೆಂಬಲ ಪಡೆದು ದ್ವೇಷ ಮತ್ತು ಅಸೂಯೆಯ ರಾಜಕೀಯ ತತ್ವಗಳನ್ನು ಹರಡುವ ವಿಕೃತ ಪ್ರಕ್ರಿಯೆಯನ್ನು ನಾವಿಂದು ಕಾಣುತ್ತಿದ್ದೇವೆ. ಆಧುನಿಕ ಭಾರತದಲ್ಲಿ ಎನ್ಡಿಟೀವಿ ಪ್ರಕರಣ ಆರಂಭವಲ್ಲ, ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯ ಅಂತಿಮ ಘಟ್ಟವನ್ನು ಇಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಸಂಭಾಷಣೆಯನ್ನೂ, ಟ್ವಿಟರ್ ಸಂದೇಶವನ್ನೂ ಮೇಲಿನ ಅಧಿಪತಿಗಳು ಗಮನಿಸುತ್ತಿದ್ದು ಅಭಿವ್ಯಕ್ತಿಯೇ ಅಪಾಯದ ಅಂಚಿನಲ್ಲಿದೆ.

ಭಾರತ ಇಂದು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿದೆ. ಭೀತಿ, ಆಕ್ರೋಶ, ಆತಂಕ, ಹತಾಶೆ ಮತ್ತು ಜಿಗುಪ್ಸೆ ಜನಸಾಮಾನ್ಯರಲ್ಲಿ ಮಡುಗಟ್ಟಿದೆ. ಪರಸ್ಪರ ವಿಶ್ವಾಸ ಮತ್ತು ನಂಬಿಕೆ ಎನ್ನುವುದು ಗತಕಾಲದ ವೈಭವ ಎನ್ನುವಂತಾಗಿದೆ. ಯಾರೂ ಸುರಕ್ಷಿತವಾಗಿಲ್ಲ. ಪ್ರಾಚೀನ ಕಾಲದ ಸ್ವಾಮಿನಿಷ್ಠೆಯ ಪರಿಕಲ್ಪನೆ ಪ್ರಜಾತಂತ್ರದ ಚೌಕಟ್ಟಿನಲ್ಲಿ ರಾರಾಜಿಸುತ್ತಿದೆ. ಇಂದಿನ ಈ ಪರಿಸ್ಥಿತಿಗೆ ಕಾರಣ ಯಾರು ? ಈ ಜಟಿಲ ಪ್ರಶ್ನೆಗೆ ಉತ್ತರವನ್ನು ಅನ್ಯ ದೇಶಗಳ ರಾಜಕಾರಣದಲ್ಲೂ ಕಂಡುಕೊಳ್ಳಬಹುದು. ಅಮೆರಿಕ, ಜಪಾನ್, ಟರ್ಕಿ ಮತ್ತು ಫ್ರಾನ್ಸ್ ಒಳಗೊಂಡಂತೆ ರಾಷ್ಟ್ರೀಯವಾದದ ಪ್ರಭಾವಕ್ಕೊಳಗಾಗಿರುವ ಎಲ್ಲ ರಾಷ್ಟ್ರಗಳಲ್ಲೂ ಬಹುತೇಕ ಇದೇ ಪರಿಸ್ಥಿತಿ ಇದೆ. ಅಪಮಾನಗೊಳಿಸುವ ಹೀಗಳಿಕೆ, ಬಂಧನ, ಹತ್ಯೆ, ಆಕ್ರಮಣ, ಹಲ್ಲೆ, ಹಠಾತ್ ದಾಳಿ, ಬೀಗಮುದ್ರೆ ಹೀಗೆ ಭಾರತದ ಮಾಧ್ಯಮ ಲೋಕ ನಿತ್ಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಹಾಗಾಗಿಯೇ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ 133ನೆಯ ಸ್ಥಾನದಿಂದ 136ನೆಯ ಸ್ಥಾನಕ್ಕೆ ಕುಸಿದಿದೆ. ಆದರೆ ಈ ಎಲ್ಲ ಸಮಸ್ಯೆಗಳಿಗೂ ರಾಜಕಾರಣವೇ ಕಾರಣವಲ್ಲ. ಆಧುನಿಕ ತಂತ್ರಜ್ಞಾನ, ಮಾರುಕಟ್ಟೆ ಆರ್ಥಿಕತೆ, ಜಾಹೀರಾತು ಪ್ರಪಂಚ ಮತ್ತು ಪ್ರಸಾರದ ಆದಾಯ ಇವೆಲ್ಲವೂ ಸಹ ಇಂದಿನ ಪರಿಸ್ಥಿತಿಗೆ ಬುನಾದಿ ನಿರ್ಮಿಸಿವೆ.