ಬಾಲಕನಿಗೆ ನೆರವಾದ ಮೀಡಿಯಾ ಕ್ಲಾಸಿಕಲ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಡತನದಲ್ಲಿರುವ ಅಜ್ಜಿಯ ಆಶ್ರಯದಲ್ಲಿ ಬೆಳೆದು ಸರಿಯಾಗಿ ಶಾಲೆಗೆ ಹೋಗಲಾಗದ ಬಾಲಕನನ್ನು ಗುರುತಿಸಿದ ಸಮಾಜ ಸೇವಾ ಸಂಘಟನೆ `ಮೀಡಿಯಾ ಕ್ಲಾಸಿಕಲ್’ ಬಾಲಕನೊಬ್ಬನಿಗೆ ಆಶ್ರಯ ನೀಡುವಲ್ಲಿ ಸಫಲವಾಗಿದೆ. ಅದು ಹೇಗೋ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿದ್ದ ಬಾಲಕಗೆ ಶಾಲೆಗೆ ಅಗತ್ಯವಾಗಿ ಬೇಕಾದ ನೊಂದಣಾ ಪತ್ರವಾಗಲಿ, ಜನನ ಪ್ರಮಾಣ ಪತ್ರವಾಗಲಿ ಇರಲಿಲ್ಲ. `ಮೀಡಿಯಾ ಕ್ಲಾಸಿಕಲ್’ ಬಡ ಕೊರಗ ಸಮುದಾಯದ ಈ ಬಾಲಕನ ಸಮಸ್ಯೆಯರಿತು ಬೆನ್ನೆಲುಬಾಗಿ ಎನ್ ಎಚ್ ಎಸ್ ಎಸ್ ಪೆರಡಾಲ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಶಾಲೆಯ ಪ್ರಾಂಶುಪಾಲರು ಹಾಗೂ ಅಧ್ಯಾಪಕ ಬಳಗದ ಪೂರ್ಣ ಸಹಕಾರ ಈ ಮಹತ್ಕಾರ್ಯಕ್ಕೆ ನೆರವಾಗಿದೆ. ಇನ್ನು ಯಾವುದೇ ಅಡೆತಡೆಗಳಿಲ್ಲದೆ ಈ ಬಾಲಕನ ವಿದ್ಯಾಭ್ಯಾಸ ಮುಂದುವರಿಯಬೇಕೆಂಬ ನಿಟ್ಟಿನಲ್ಲಿ ವಸತಿಯ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಅಂತೆಯೇ ಅಗತ್ಯ ವಸ್ತುಗಳಾದ ಸಮವಸ್ತ್ರ, ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನೂ ಪೂರೈಸಿಕೊಡುವುದರ ಮೂಲಕ `ಮೀಡಿಯಾ ಕ್ಲಾಸಿಕಲ್’ ಸಮಾಜಕ್ಕೆ ಮಾದರಿಯಾಗಿದೆ.