ಧರ್ ಜೈಲಿನಲ್ಲಿ ಬಂಧಿಯಾಗಿರುವ ಮೇಧಾ ಮೇಲೆ ಅಪಹರಣದ ಆರೋಪವೂ ದಾಖಲು

ಅನಿರ್ದಿಷ್ಟಾವಧಿ ಉಪವಾಸದಲ್ಲಿದ್ದ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಮೇಲೆ ಅಪಹರಣ ಸೇರಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಿ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಧರ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯನ್ನು ಅಪಹರಿಸಿದ ಆರೋಪವೂ ದಾಖಲಾಗಿದೆ.

ಧರ್ ಜಿಲ್ಲೆಯ ಜೈಲಿನಲ್ಲಿ ಬಂಧಿಯಾಗಿರುವ ಪಾಟ್ಕರ್ ಅವರನ್ನು ಇಂದೋರಿನ ಬಾಂಬೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದರು. ಬಿಡುಗಡೆಯ ನಂತರ ಮೇಧಾ ಮತ್ತೆ ಅನಿರ್ದಿಷ್ಟಾವಧಿ ಉಪವಾಸ ಮಾಡಲು ಚಿಕಿಲ್ಡಾ ಗ್ರಾಮಕ್ಕೆ ಹೋಗಲು ಬಯಸಿದ್ದ ಕಾರಣ ಶಾಂತಿ ಭಂಗ ಮಾಡಿರುವ ಆರೋಪವನ್ನೂ, ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಭಂಗ ತರಲು ಪ್ರಯತ್ನಿಸಿದ ಆರೋಪವನ್ನೂ ಹೊರಿಸಲಾಗಿದೆ.

ಕಂದಾಯ ಇಲಾಖೆಯ ಅಧಿಕಾರಿ ಮತ್ತು ನಯಾಬ್ ತಹಶೀಲ್ದಾರ ಕಮಲ್ ಮದೇಲಿಯರನ್ನು ನರ್ಮದಾ ಬಚಾವೋ ಆಂದೋಲನದ ಕಾರ್ಯಕರ್ತರು ಒತ್ತಡಪೂರ್ವಕ ಧರ್ ಜಿಲ್ಲೆಯ ಚಿಕಿಲ್ಡಾ ಗ್ರಾಮಕ್ಕೆ ಕೊಂಡೊಯ್ದಿರುವುದನ್ನು ಅಪಹರಣದ ಪ್ರಯತ್ನವೆಂದು ದೂರಿನಲ್ಲಿ ವಿವರಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಸಾಧ್ಯವಾಗದ ಕಾರಣ ಮೇಧಾ ಪಾಟ್ಕರ್ ಅವರನ್ನು ತಾಂತ್ರಿಕ ಕಾರಣಗಳಿಂದ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಲಾಗಿಲ್ಲ. ಹೀಗಾಗಿ ಮೇಧಾ ಅವರ ಮೇಲೆ ಹೇರಲಾದ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಮೇಧಾ ಅವರು ಶಾಂತಿಗೆ ಭಂಗ ತಂದಿರುವ ಆರೋಪದ ಪ್ರಕರಣದಲ್ಲಿ ಜಾಮೀನು ಅರ್ಜಿ ಹಾಕಲೂ ನಿರಾಕರಿಸಿದ್ದಾರೆ.