ಪಲ್ಗುಣಿ ಮಲಿನ ಪ್ರಕ್ರಿಯೆಯಲ್ಲಿ ಪಾಲಿಕೆ ಪಾತ್ರ ಇಲ್ಲ : ಮೇಯರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಳವೂರು ವೆಂಟೆಂಡ್ ಡ್ಯಾಂನಲ್ಲಿ ಮೀನುಗಳ ಮಾರಣ ಹೋಮ ನಡೆದಿರುವುದಕ್ಕೆ ನದಿ ನೀರು ಕಲುಷಿತಗೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ಕಾರಣ ಅನ್ನುವ ಆರೋಪವನ್ನು ಮೇಯರ್ ಕವಿತಾ ಸನಿಲ್ ಮತ್ತು ಆಯುಕ್ತ ಮೊಹಮ್ಮದ್ ನಝೀರ್ ತಳ್ಳಿಹಾಕಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು “ಕೊಂಗನೂರು ವೆಟ್ವೆಲ್ (ನಂ 9)ರಿಂದ ತ್ಯಾಜ್ಯ ನೀರು ಹೊರಬಿಡುತ್ತಿರುವುದು ನದಿ ನೀರು ಕಲುಷಿತಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇದು ಸರಿಯಲ್ಲ. ನೀರು ಶುದ್ಧೀಕರಣ ಘಟಕದ ಮೂಲಕ ಸ್ವಚ್ಛ ಮಾಡಿ ಹರಿಯಬಿಡಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಜನರೇಟರ್ ಕೊರತೆ ಇದ್ದ ಸಂಧರ್ಭದಲ್ಲಿ ಈ ಸಮಸ್ಯೆ ಆಗಿರುವ ಸಾಧ್ಯತೆಗಳಿವೆ. ಆದರೆ ಇದೀಗ ಅಂತಹ ಸಮಸ್ಯೆಗಳಿಲ್ಲ” ಎಂದರು.

ಐದು ತಿಂಗಳ ಹಿಂದೆಯಷ್ಟೇ ಈ ವೆಟ್ವೆಲ್ ಸಮಸ್ಯೆಯನ್ನು ಪಾಲಿಕೆ ಇಂಜಿನಿಯರುಗಳು ಪರಿಶೀಲನೆ ನಡೆಸಿದ್ದಾರೆ ಎಂದು ಆಯುಕ್ತ ನಝೀರ್ ಹೇಳಿದರು.

“ಚಾನೆಲ್ ಮೂಲಕ ಸ್ವಚ್ಛ ನೀರು ಹರಿಯಬಿಡಲಾಗುತ್ತಿದ್ದು, ಬೇಸಗೆ ಕಾಲದಲ್ಲಿ ಇದು ಸಂಪೂರ್ಣ ಬತ್ತಿ ಹೋಗುತ್ತದೆ ಎಂದ ಆಯುಕ್ತರು ತ್ಯಾಜ್ಯ ನೀರು ಅಲ್ಲಿ ಬಿಡುವುದಾದರೆ ಏನಾದರೂ ಕುರುಹುಗಳು ಇದ್ದೇ ಇರುತ್ತದೆ. ಯಾರು ಬೇಕಾದರೂ ಅದನ್ನು ಪರಿಶೀಲನೆ ಮಾಡಬಹುದಾಗಿದೆ. ಎಲ್ಲಾ ವಿಚಾರಗಳಿಗೂ ಮಂಗಳೂರು ನಗರ ಪಾಲಿಕೆಯನ್ನು ಹೊಣೆಯನ್ನಾಗಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ” ಎಂದು ಮೇಯರ್ ಹೇಳಿದರು.