ಭಿನ್ನಚೇತನರಿಗೆ ಪಾಲಿಕೆಯಿಂದ ಸಹಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಹಾನಗರಪಾಲಿಕೆಯು ತನ್ನ ಎಲ್ಲಾ ಅಭಿವೃದ್ಧಿ ಯೋಜನೆಗಳ ಮೂರು ಶೇಕಡಾ ನಿಧಿಯನ್ನು ಮತ್ತು ರಾಜ್ಯ ಹಣಕಾಸು ಆಯೋಗದ ನಿಧಿಯನ್ನು ಭಿನ್ನಚೇತನರ ಅನುಕೂಲಕ್ಕಾಗಿ ಬಳಸಲಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಅವರು ನಗರ ಬಡತನ ನಿವಾರಣೆ ಘಟಕ ಮನಪಾ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಿನ್ನಚೇತನ ಫಲಾನುಭವಿಗಳಿಗೆ ಸಹಾಯಧನ, ವಸ್ತುಗಳು ಮತ್ತು ಭಿನ್ನಚೇತನರಿಗೆ ಹಣ ವಿತರಿಸುತ್ತಾ “ಭಿನ್ನಚೇತನರ ನೆರವಿಗಾಗಿ ಒಟ್ಟು ರೂ 73 ಲಕ್ಷ ಮೀಸಲಿಡಲಾಗಿದೆ’ ಎಂದು ಹೇಳಿದರು.

“ಈ ಹಿಂದೆ ಸುಮಾರು 3 ಶೇಕಡಾ ಹಣದಲ್ಲಿ ಸುಮಾರು 50 ಶೇಕಡಾ ಮೊತ್ತವನ್ನು ಕಟ್ಟಡಗಳ ನಿರ್ಮಾಣಕ್ಕೆ ಮತ್ತು ಭಿನ್ನಚೇತನ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಮತ್ತು ಇತರ ಕೆಲಸಗಳಿಗೆ ಬಳಸಿದೆ. ಆದರೆ ಈ ಬಾರಿ ಸಂಪೂರ್ಣ ನಿಧಿಯನ್ನು ಭಿನ್ನಚೇತನರಿಗಾಗಿ ಬಳಸಲು ನಿರ್ಧರಿಸಲಾಗಿದೆ” ಎಂದು ಮನಪಾ ಸಮುದಾಯ ವ್ಯವಹಾರಗಳ ಅಧಿಕಾರಿ ಮೆಲ್ವಿನ್ ರಾಡ್ರಿಗಸ್ ಹೇಳಿದರು.  ಅದೇ ರೀತಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಭಿನ್ನಚೇತನರು ರೂ 25,000 ಮೊತ್ತದವರೆಗೆ ಪ್ರೋತ್ಸಾಹ ಧನ ಪಡೆಯುತ್ತಾರೆ. ಮಂಗಳವಾರ ಮನಪಾದಲ್ಲಿ ರೂ 5.30 ಲಕ್ಷದವರೆಗಿನ ಚೆಕ್ಕನ್ನು ಸುಮಾರು 35 ಫಲಾನುಭವಿಗಳಿಗೆ ಮೇಯರ್ ಕವಿತಾ ಸನಿಲ್ ವಿತರಿಸಿದರು.

ಭಿನ್ನಚೇತನರು ಜೀವನದಲ್ಲಿ ಮುಂದೆ ಬರಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡುವುದಾಗಿ ಸನಿಲ್ ಹೇಳಿದರು. ಮನಪಾ ಒದಗಿಸುವ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡುವಂತೆ ಮನಪಾ ಆಯುಕ್ತ ಮಹಮ್ಮದ್ ನಝೀರ್ ಫಲಾನುಭವಿಗಳಿಗೆ ತಿಳಿಸಿದರು.