ಬಾರ್ ಉದ್ಘಾಟನೆಗೆ ಬಂದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದ ಮೇಯರ್ ವಾಪಾಸ್

ಆದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ

ಮಾಜಿ ಮೇಯರ್ ಶಶಿಧರ್ ಹೆಗ್ಡೆ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಬ್ಬುಗಳಿಗೆ ದಾಳಿ, ಸ್ಕಿಲ್ ಗೇಮ್ಮುಗಳಿಗೆ ರೈಡ್, ಮಸಾಜ್ ಸೆಂಟರ್, ಅನೈತಿಕ ಧಂದೆಗಳಿಗೆ ಕಡಿವಾಣ ಹಾಕಿದ ಮಂಗಳೂರು ಮೇಯರ್ ಕವಿತಾ ಸನಿಲ್ ಗುರುವಾರದಂದು ನಗರದ ಕುಂಟಿಕಾನದಲ್ಲಿರುವ ಬಾರ್ ಅಂಡ್ ರೆಸ್ಟೋರಂಟ್ ಉದ್ಘಾಟನೆ ಮಾಡಲು ಹೋಗಿ ಶಾಲಾ ವಿದ್ಯಾರ್ಥಿಗಳ ಮುಂದೆ ಪೇಚಿಗೆ ಸಿಲುಕಿದ ಘಟನೆ ನಡೆಯಿತು.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಕುಂಟಿಕಾನದ ಬಳಿ ನೂತನ ಬಾರ್ ಅಂಡ್ ರೆಸ್ಟೋರಂಟ್ ನಿರ್ಮಿಸಲಾಗಿತ್ತು. ಆದರೆ ನೂತನ ಬಾರ್ ಸಮೀಪದಲ್ಲೇ ಶಾಲೆಯೊಂದಿದೆ. ಶಾಲೆಯಿಂದ ಮದ್ಯದಂಗಡಿ ಕೇವಲ 72ರಿಂದ 80 ಅಡಿ ದೂರದಲ್ಲಿದೆ. ಕಾನೂನಿನ ಪ್ರಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ಕುಂಟಿಕಾನದ ಮರಿಯಾ ಭವನ್ ಕಾನ್ವೆಂಟ್, ಸಿಸ್ಟರ್ ಆಫ್ ಅನ್ನಾ ಆಫ್

ಪ್ರೊವಿಡೆಂಟ್ಸ್ ಮತ್ತು ಸೈಂಟ್ ಆ್ಯನ್ಸ್ ಹೈಸ್ಕೂಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕರು ಜೊತೆಗೂಡಿ ಬಂದು ಮೇಯರಿಗೆ ದಿಗ್ಬಂಧನ ಹಾಕಿ ಪ್ರತಿಭಟನೆಗೆ ಇಳಿದಿದ್ದರು.

“ನಾವು ನಿರ್ಮಿಸುತ್ತಿರುವ ಈ ಮದ್ಯದಂಗಡಿ ಈ ಶಾಲೆಯ ಕಂಪೌಂಡಿನಿಂದ 100 ಮೀಟರ್ ದೂರದಲ್ಲಿದೆ. ಇಲಾಖೆ ಎನ್ ಒ ಸಿ ಪಡೆದು, ಅಬಕಾರಿ ಪರವಾನಿಗೆ ಪಡೆದುಕೊಂಡೇ ತಾವು ಉದ್ಘಾಟನೆಗೆ ಮುಂದಾಗಿದ್ದೇವೆ” ಎಂದು ಬಾರ್ ಮಾಲಕರು ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿ ಪ್ರತಿಭಟನೆ ನಡೆಸಿ ಎಂದು ಹೇಳಿದಾಗ, ಈ ಸಂದರ್ಭದಲ್ಲಿ ಒಂದು ಹಂತದಲ್ಲಿ ಮಾತಿನ ವಾಕ್ಸಮರವೂ ನಡೆದಿದೆ.

ಶಾಲೆಯ ವಿದ್ಯಾರ್ಥಿಗಳು `ಬಾರ್ ಬೇಡ, ಮದ್ಯದಂಗಡಿಗೆ ಅನುಮತಿ ಬೇಡ, ಅಂಗಡಿ ಓಕೆ-ಬಾರ್ ಯಾಕೆ’ ಎಂದು ಬರೆದ ಫ್ಲೆಕ್ಸುಗಳನ್ನು ಹಿಡಿದುಕೊಂಡು ಧಿಕ್ಕಾರವನ್ನೂ ಕೂಗಿದರು. ಈ ಸಂದರ್ಭ ಮಂಗಳೂರು ನಗರ ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ ಬಾರ್ ಮಾಲಿಕರ ಪರವಾಗಿ ಮಾತನಾಡಲು ಮುಂದಾದರೂ ಕೊನೆಗೆ ಪೋಷಕರ ಆಕ್ರೋಶಕ್ಕೆ ಮಣಿದು ಮೌನವಾದರು.

ಕೊನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮೇಯರ್ ಕವಿತಾ ಸನಿಲ್, “ರೆಸ್ಟೋರೆಂಟ್ ಮಾಲಕ ಲಕ್ಷ್ಮಣ್ ಶೆಟ್ಟಿ ಅವರು ಆತ್ಮೀಯರಾಗಿದ್ದ ಕಾರಣ ಅವರ ಕರೆಗೆ ಓಗೊಟ್ಟು ಉದ್ಘಾಟನೆಗೆ ಬಂದಿದ್ದೇನೆ. ಆದರೆ ಇಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಬಾರ್ ಮಾಲಕರು ಕಾನೂನು ಪ್ರಕಾರ ನಾವು ಸರಿ ಇದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಶಾಲೆಯವರು 100 ಮೀಟರ್ ಒಳಗಡೆ ಬಾರ್ ತೆರೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಸತ್ಯಾಸತ್ಯತೆ ಏನು ಎಂಬುದನ್ನು ಸಂಬಂಧಪಟ್ಟ ಇಲಾಖೆಯವರು ಅಳತೆ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ. ಇಲ್ಲಿ ಸ್ವಲ್ಪಮಟ್ಟಿನ ಗೊಂದಲ ಇರುವುದು ನಿಜ. ಅದು ಬಗೆಹರಿಯದೆ ನಾನು ಉದ್ಘಾಟನೆ ಮಾಡುವುದು ಸರಿ ಅಲ್ಲ ಎಂದು ತೀರ್ಮಾನಿಸಿ ವಾಪಸ್ ಹೋಗುತ್ತಿದ್ದೇನೆ” ಎಂದರು.

ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಜಾಸ್ಮಿನ್ ಡಿಸೋಜ ಮಾತನಾಡಿ, “ಶಾಲೆ ಎದುರು ಬಾರ್ ತೆರೆಯವುದು ಸರಿಯೇ ನೀವೇ ಹೇಳಿ” ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. “ನಮಗೆ ಇಲ್ಲಿ ಬಾರ್ ತೆರೆಯುವ ಸೂಚನೆ ಸಿಕ್ಕಿಲ್ಲ. ಇಲ್ಲದಿದ್ದರೆ ನಾವು ಅಂದೇ ಪ್ರತಿಭಟನೆ ಮಾಡುತ್ತಿದ್ದೆವು. ಬಾರ್ ವಿರೋಧಿಸಿ ನಾವು ಅಬಕಾರಿ ಆಯುಕ್ತರ ಬಳಿ, ಜಿಲ್ಲಾಧಿಕಾರಿ ಬಳಿ ಈಗಾಗಲೇ ದೂರು ನೀಡಿದ್ದೇವೆ. ಆದರೆ ನಮಗೆ ಸರಿಯಾದ ಸ್ಪಂದನೆ ಯಾರಿಂದಲೂ ಸಿಕ್ಕಿಲ್ಲ. ನಾವು ಸರ್ವೆ ಮಾಡಿದ್ದು, ನಮಗೆ ಶಾಲೆಯಿಂದ ಕೇವಲ 80 ಮೀಟರ್ ಒಳಗೆ ಬಾರ್ ಇರುವುದಾಗಿ ತಿಳಿದುಬಂದಿದೆ. ಹೀಗಾಗಿ ನಾವು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಂಗಳೂರಿನ ಮಹಿಳಾ ಮೇಯರ್ ಇದನ್ನು ಉದ್ಘಾಟಿಸಲು ಮುಂದಾಗಿರುವುದು ನಮಗೆ ಅಸಮಾಧಾನ ಮೂಡಿಸಿದೆ. ಶಾಲೆಯಿಂದ ಎಷ್ಟು ದೂರ ಇದೆ ಎಂದು ಮೊದಲು ಸರ್ವೆ ನಡೆಯಲಿ ಎನ್ನುವುದು ನಮ್ಮ ಆಗ್ರಹ” ಎಂದರು.

ಮೇಯರ್ ಹೋದ ಬಳಿಕ ನಿಗದಿತ ಸಮಯದಲ್ಲಿಯೇ ಬಾರ್ ಅಂಡ್ ರೆಸ್ಟೋರಂಟ್‍ನ ಉದ್ಘಾಟನೆ ಕಾರ್ಯ ನಡೆಯಿತು. ಕಾಪೆರ್Çರೇಟರ್ ಮತ್ತು ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜೇಶ್ ಸೇರಿದಂತೆ ಉಳಿದ ಜನಪ್ರತಿನಿಧಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

LEAVE A REPLY