ದಲಿತ ಕಾರ್ಯಕರ್ತೆಯರು ಮಾಡಿದ ಆಹಾರ `ಒಲ್ಲೆ’ ಎಂದ ಗರ್ಭಿಣಿಯರು

ಮಾತೃಪೂರ್ಣ ಯೋಜನೆಗೆ ವಿಘ್ನ

ಚಿಕ್ಕಬಳ್ಳಾಪುರ : ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲೂಡಿಸುವ ತಾಯಂದಿರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಅಂಗನವಾಡಿಗಳಲ್ಲಿ ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆ ಸಡಗರದಿಂದ ಜಾರಿಗೊಂಡಿದೆಯಾದರೂ ಈ ಯೋಜನೆಗೆ ಹಲವೆಡೆ ಅಡ್ಡಿ ಆತಂಕ ಎದುರಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 1,916 ಅಂಗನವಾಡಿಗಳ ಪೈಕಿ 350ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ  ಈ ಯೋಜನೆಯನ್ವಯ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಅಂಗನವಾಡಿ ಕಾರ್ಯಕರ್ತೆಯರು ಆಹಾರ ತಯಾರಿಸುತ್ತಾರೆಂಬ

ಒಂದೇ ಕಾರಣಕ್ಕೆ ಅಲ್ಲಿಗೆ ಆಹಾರ ಸೇವಿಸಲು ಫಲಾನುಭವಿಗಳು ಬರುತ್ತಿಲ್ಲವಾದುದರಿಂದ  ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿ ಆಹಾರ ಸಿದ್ಧಪಡಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು ಅಂಗನವಾಡಿ ಕಾರ್ಯಕರ್ತೆಯರ ಪೈಕಿ 365 ಮಂದಿ ಪರಿಶಿಷ್ಟ ಜಾತಿಗಳಿಗೆ ಸೇರಿದ್ದರೆ, 343 ಮಂದಿ ಪರಿಶಿಷ್ಟ ವರ್ಗದವರಾಗಿದ್ದಾರೆ. ಕೆಲವು ಅಂಗನವಾಡಿಗಳಲ್ಲಿ ಸಾಮಾನ್ಯ ವಿಭಾಗಕ್ಕೆ ಸೇರಿದ ಅಂಗನವಾಡಿ ಕಾರ್ಯಕರ್ತೆಯರು  ಆಹಾರ ಸಿದ್ಧಪಡಿಸುತ್ತಾರಾದರೂ ಅಲ್ಲಿ ಬೆರಳೆಣಿಕೆಯ ಫಲಾನುಭವಿಗಳು ಬರುತ್ತಿದ್ದಾರೆ.

ಇಲ್ಲಿ  ಜಾತಿಯ ಪ್ರಶ್ನೆಯಿಲ್ಲ ಎಂದು ಹೇಳುವ ಕೆಲವು ಫಲಾನುಭವಿಗಳು, ತಮಗೆ ಈ ಹಿಂದಿನಂತೆಯೇ ಪೌಷ್ಠಿಕಾಂಶಯುಕ್ತ ಆಹಾರದ ಪೊಟ್ಟಣಗಳನ್ನು ನೀಡಿದರಷ್ಟೇ ಸಾಕು ಎನ್ನುತ್ತಿದ್ದಾರೆ.

ಚಿಕ್ಕಕಡಗೆನಹಳ್ಳಿಯ ಅಂಗನವಾಡಿ  ಕೇಂದ್ರದಲ್ಲಿ ಅಡುಗೆ ತಯಾರಿಸುವ ಕಾರ್ಯಕರ್ತೆ ಮತ್ತು ಅವರ ಸಹಾಯಕಿ ಇಬ್ಬರೂ ದಲಿತರಾದ ಕಾರಣ ಇಲ್ಲಿ ಗುರುತಿಸಲ್ಪಟ್ಟ 15 ಫಲಾನುಭವಿಗಳಲ್ಲಿ ಯಾರೂ ಬರುತ್ತಿಲ್ಲ. ಶ್ರೀರಾಮಪುರ ಅಂಗನವಾಡಿ ಕೇಂದ್ರದ ಪರಿಸ್ಥಿತಿಯೂ ಇದೇ ಆಗಿದೆ. ಇಲ್ಲಿ ಒಟ್ಟು 22 ಫಲಾನುಭವಿಗಳನ್ನು ಗುರುತಿಸಲಾಗಿದೆ. ಕೆಲವೆಡೆ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ಮನೆಗೆ ಹೋಗಿ ಅವರ ಮನವೊಲಿಸಲು ಪ್ರಯತ್ನಿಸಿದರೂ ಸಫಲತೆ ಕಂಡಿಲ್ಲ.