ಮಸಾಜ್ ಸೆಂಟರಿಗೆ ದಾಳಿ : ಯುವತಿಯರ ಸಹಿತ 5 ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತೊಕ್ಕೊಟ್ಟಿನ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಕಾಪಿಕಾಡು ಎಂಬಲ್ಲಿರುವ ಮಸಾಜ್ ಸೆಂಟರಿಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಇಬ್ಬರು ಯುವಕರು, ಇಬ್ಬರು ಯುವತಿಯರು ಸೇರಿದಂತೆ ಸೆಂಟರ್ ಮಾಲಿಕನನ್ನು ಬಂಧಿಸಿರುವ ಘಟನೆ ನಡೆದಿದೆ.

ಮಸಾಜ್ ಸೆಂಟರ್ ಮಾಲಕ ಉಡುಪಿಯ ಪ್ರವೀಣ್, ಕಾರವಾರ ಹಾಗೂ ಮಡಿಕೇರಿ ಮೂಲದ ಇಬ್ಬರು ಯುವತಿಯರು ಹಾಗೂ ಮಂಜೇಶ್ವರ ನಿವಾಸಿಗಳಾದ ನೂರುದ್ದೀನ್ ಮತ್ತು ಅಶ್ರಫ್ ಎಂಬವರನ್ನು ಬಂಧಿಸಲಾಗಿದೆ. ತೊಕ್ಕೊಟ್ಟು ಕಾಪಿಕಾಡಿನಲ್ಲಿ ಕಳೆದ ಕೆಲ ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದ `ವಿಲ್ಲೋಸ್ ಹಾರ್ ಸ್ಕಿನ್ ಸ್ಪಾ’ ಎಂಬ ಬಾಡಿ ಮಸಾಜ್ ಪಾರ್ಲರಿಗೆ ಪೊಲೀಸರು ದಾಳಿ ನಡೆಸಿದ್ದರು.

ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮೊದಲೇ ಮಾಹಿತಿ ಲಭಿಸಿತ್ತು. ಅದರಂತೆ ಗುಪ್ತವಾಗಿ ಗ್ರಾಹಕರ ಸೋಗಿನಲ್ಲಿ ಬಂದ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ರೂ 950 ಹಾಗೂ ಮೊಬೈಲುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ಉಳ್ಳಾಲ ಠಾಣಾ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಿದ್ದಾರೆ.