ಮಾರುತಿ ಒಮ್ನಿ ಕಾರಿಗೆ ಬೆಂಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರನ್ನು ದುರಸ್ತಿ ಪಡಿಸಿ ಮರಳಿ ಬರುತ್ತಿದ್ದಾಗ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಭಾಗಶಃ ಸುಟ್ಟು ಹೋದ ಘಟನೆ ನಗರದ ಲೈಟ್‍ವಹೌಸ್ ಹಿಲ್ ರಸ್ತೆ ಪಕ್ಕದಲ್ಲಿ ಮಂಗಳವಾರ ನಡೆದಿದೆ.

ಕಾರಿನಲ್ಲಿ ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಟ್ಯಾಂಕಿನ ಬಳಿ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಕಾರನ್ನು ಕಂಪೆನಿಯಲ್ಲಿ ದುರಸ್ತಿಪಡಿಸಿ ಇದರ ಮಾಲಕ ಆರೀಫ್ ಎಂಬವರು ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಕಾರಿನಲ್ಲಿ ಹೊಗೆ ಹಾಗೂ ಸುಟ್ಟ ವಾಸನೆ ಬರುತ್ತಿರುವುದನ್ನು ಕಂಡ ಆರೀಫ್ ಕೂಡಲೇ ಅದನ್ನು ಲೈಟ್ ಹೌಸ್ ಹಿಲ್ ರಸ್ತೆ ಪಕ್ಕದ ಎಂಸಿಸಿ ಬ್ಯಾಂಕಿನ ಬಳಿ ನಿಲ್ಲಿಸಿ ತಮ್ಮ ಕಾರು ಡೀಲರಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿದರು.  ಅಲ್ಲದೆ ಅವರು ಅಗ್ನಿಶಾಮಕ ದಳಕ್ಕೂ ವಿಷಯ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಾರಿಗೆ ಪೂರ್ತಿ ಬೆಂಕಿ ಹಿಡಿದಿದೆ. ಅಗ್ನಿ ಶಾಮಕದಳ ಸಿಬ್ಬಂದಿಗಳು ಆಗಮಿಸುವಷ್ಟರಲ್ಲಿ ಕಾರಿನ ಬಹುತೇಕ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಕಾರನ್ನು ಮತ್ತೆ ದುರಸ್ತಿಪಡಿಸಲು ಕಂಪನಿ ಶೂರೂಂಗೆ ಸಾಗಿಸಲಾಗಿದೆ.