ಮದುವೆಯಾದರೂ ಮೊದಲ ಪ್ರೀತಿಯ ಕಡೆ ಸೆಳೆತ

ಪ್ರ : ನನಗೀಗ ಮದುವೆಯಾಗಿ ಹತ್ತು ವರ್ಷವಾಯಿತು. ನಾನು ನನ್ನ ಮದುವೆಗಿಂತಲೂ ಮೊದಲು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ನನ್ನ ಪ್ರೀತಿಯನ್ನು ಆತನ ಹತ್ತಿರ ಹೇಳಿಕೊಳ್ಳಲೇ ಇಲ್ಲ. ಕೌಟುಂಬಿಕ ಒತ್ತಡದಿಂದಾಗಿ ಮನೆಯವರು ನೋಡಿದ ಹುಡುಗನನ್ನೇ ಮದುವೆಯಾದೆ. ಈಗ ಒಬ್ಬಳು ಮಗಳಿದ್ದಾಳೆ. ನಾನು ನನ್ನ ದಾಂಪತ್ಯವನ್ನು ನನ್ನ ಕರ್ತವ್ಯದ ದೃಷ್ಟಿಯಿಂದ ನಿಭಾಯಿಸುತ್ತಿದ್ದೇನೆ. ನನಗೆ ನನ್ನ ಗಂಡನ ಬಗ್ಗೆ ಜವಾಬ್ದಾರಿ ಇದ್ದರೂ ನನ್ನ ಕನಸಿನ ಹುಡುಗ ಅವನೆಂದೂ ಆಗಿರಲಿಲ್ಲ. ಗಂಡ ಸ್ವಲ್ಪ ಬೋರಿಂಗ್ ಟೈಪ್ ಬೇರೆ. ಅನೇಕ ಬಾರಿ ನಾನು ಇಷ್ಟ ಪಡುತ್ತಿದ್ದ ಹುಡುಗನ ನೆನಪಾಗುತ್ತಿತ್ತು. ಆ ಹುಡುಗನೂ ನನ್ನನ್ನು ಮನದಲ್ಲೇ ಪ್ರೀತಿಸುತ್ತಿದ್ದನಂತೆ. ಆದರೆ ಆಗ ಅವನ ಅಕ್ಕನಿಗೆ ಮದುವೆಯಾಗದ ಕಾರಣ ನನ್ನ ಹತ್ತಿರ ಹೇಳಿಕೊಂಡಿರಲಿಲ್ಲವಂತೆ. ಅದು ನನ್ನ ಮದುವೆಯಾದ ನಂತರ ನನಗೆ ಗೆಳತಿಯಿಂದ ತಿಳಿಯಿತು. ಕಳೆದ ತಿಂಗಳು ಅಕಸ್ಮಾತ್ತಾಗಿ ಆತನನ್ನು ಫೇಸ್‍ಬುಕ್ಕಿನಲ್ಲಿ ನೋಡಿದೆ. ಅವನೇ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ನಾನು ಎಸ್ ಅಂದೆ. ಆತ ತನ್ನ ಹೆಂಡತಿ ಮತ್ತು ಮಗು ಜೊತೆಗಿದ್ದ ಫೋಟೋಗಳನ್ನೆಲ್ಲ ಅದರಲ್ಲಿ ಅಪ್‍ಲೋಡ್ ಮಾಡಿದ್ದ. ಸಂತೋಷದಲ್ಲಿರುವಂತೆ ಕಾಣುತ್ತಾನೆ. ನನಗೀಗ ಅವನ ಜೊತೆಗಿನ ಫ್ರೆಂಡ್ಶಿಪ್ ಮುಂದುವರಿಸಬೇಕೆನ್ನುವ ತುಡಿತ ಮನದಲ್ಲಿ ಮೂಡುತ್ತಿದೆ. ಆತನ ಬಗ್ಗೆ ಕಂಡ ಕನಸೆಲ್ಲ ನೆನಪಾಗಿ ಚಾಟ್ ಮಾಡಲು ಮನಸ್ಸು ಹಾತೊರೆಯುತ್ತಿದೆ. ಅದು ತಪ್ಪಾ?

ಉ : ನಿಮಗೆ ಆತನ ಜೊತೆ ಬರೀ ಚಾಟ್ ಮಾಡಬೇಕು ಅನ್ನುವ ಆಸೆಯಿದ್ದರೆ ತೊಂದರೆಯಿರಲಿಲ್ಲ. ಗಂಡು-ಹೆಣ್ಣಿನ ನಡುವೆ ಆರೋಗ್ಯಕರ ಫ್ರೆಂಡ್ಶಿಪ್ ಇದ್ದರೆ ಯಾವಾಗಲೂ ಅಡ್ಡಿ ಇಲ್ಲ. ಆದರೆ ನಿಮ್ಮ ಸ್ನೇಹ ಬೇರೆಯದಕ್ಕೆ ಎಡೆ ಮಾಡಿಕೊಟ್ಟರೆ ಕಷ್ಟ. ಈಗಾಗಲೇ ನೀವು ಆತನ ಬಗ್ಗೆ ಕನಸು ಕಾಣುತ್ತಿದ್ದೀರಿ. ಹಾಗಿರುವಾಗ ನಿಮ್ಮ ಸ್ನೇಹವೂ ಶುರುವಾದರೆ ನಿಮ್ಮ ಮನಸ್ಸಿನ ಬಗ್ಗೆ ನಿಮಗೇ ಹತೋಟಿ ತಪ್ಪಿದರೆ ಅವಾಂತರವಾಗುತ್ತದೆ. ಆತನೂ ಈಗ ಮದುವೆಯಾಗಿ ಮಗು ಜೊತೆ ಸುಖಸಂಸಾರ ಮಾಡುತ್ತಿದ್ದಾನೆ. ಆತನೂ ಹಿಂದಿನ ತನ್ನ ಪ್ರೀತಿಯನ್ನು ಮರೆತು ಜೀವನದಲ್ಲಿ ಈಗಾಗಲೇ ಮುಂದೆ ಹೋಗಿದ್ದಾನೆ. ನೀವೂ ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಆಗದಿದ್ದರೂ ದಾಂಪತ್ಯ ಜೀವನ ನಡೆಸಿದ್ದೀರಿ. ಅದರ ಫಲವಾಗಿ ಮಗಳೂ ಇದ್ದಾಳೆ. ಅದೂ ಅಲ್ಲದೇ ನೀವಿರುವುದು ಈಗ ಭಾರತದಲ್ಲಿ ವಿದೇಶದಲ್ಲಲ್ಲ. ಬೇಕೆಂದಾಗ ಮದುವೆಯಾಗಿ ಬೇಡದಾಗ ಯಾವ ಬಂಧನವೂ ಇಲ್ಲದೇ ದೂರವಾಗಲು. ಆದ್ದರಿಂದ ನಿಮ್ಮ ನಡುವೆ ರೆಗ್ಯುಲರ್ ಚಾಟಿಂಗ್ ಪ್ರಾರಂಭವಾದರೆ ಪ್ರಯೋಜನಕ್ಕಿಂತ ಅದರಿಂದ ತೊಂದರೆಯೇ ಜಾಸ್ತಿ. ಇಬ್ಬರ ಕುಟುಂಬದಲ್ಲೂ ಅಶಾಂತಿ ತಲೆದೋರಬಹುದು. ನಿಮ್ಮಿಬ್ಬರ ದಾರಿಯೇ ಈಗ ಬೇರೆಯಾದ ಕಾರಣ ಹಿಂದಿನದ್ದರ ಬಗ್ಗೆ ಯೋಚಿಸದೇ ನಿಮಗೆ ಸಿಕ್ಕ ಸಂಗಾತಿಯ ಜೊತೆಯೇ ತೃಪ್ತಿ ಮತ್ತು ಸುಖದಿಂದ ಇರಲು ಪ್ರಯತ್ನಿಸಿ.

LEAVE A REPLY