ವಿವಾಹಿತೆ ಬಾವಿಗೆ ಹಾರಿ ಆತ್ಮಹತ್ಯೆ

ದಿಢೀರ್ ನಾಪತ್ತೆಯಾದವಳ ಶವ ಬಾವಿಯಲ್ಲಿ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ ನವವಿವಾಹಿತೆಯೊಬ್ಬರು ಪತಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ಅಳಿಯೂರು ಪಾಪುಲಾಡಿ ಎಂಬಲ್ಲಿ ನಡೆದಿದೆ.

ಸಂಧ್ಯಾ ಜೈನ್ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ವಕೀಲ ಮಯೂರ ಕೀರ್ತಿ ಎಂಬವರ ಪತ್ನಿ. ಕಳೆದ ವರ್ಷದ ನವೆಂಬರಿನಲ್ಲಿ ಇವರು ವಿವಾಹವಾಗಿದ್ದರು. ಭಾನುವಾರ ಮಹಾವೀರ ಜಯಂತಿ ಪ್ರಯುಕ್ತ ಸಮೀಪದ ದರೆಗುಡ್ಡೆ ಬಸದಿಯಲ್ಲಿ ಪೂಜೆಗೆಂದು ತೆರಳಿದ್ದ ದಂಪತಿ ರಾತ್ರಿ 8.30ರ ಸುಮಾರಿಗೆ ಮನೆಗೆ ವಾಪಾಸು ಬಂದಿದ್ದರೆಂದು ತಿಳಿದುಬಂದಿದೆ.

ಮನೆಗೆ ಬಂದ ಮೇಲೆ ಇದ್ದಕ್ಕಿದ್ದಂತೆ ಕಾಣೆಯಾದ ಸಂಧ್ಯಾ ಜೈನ್ ರಾತ್ರಿ ಹನ್ನೆರಡಾದರೂ ಪತ್ತೆಯಾಗದಿದ್ದರಿಂದ ಆಕೆಯ ಪತಿ ಮಯೂರ ಕೀರ್ತಿ ಅವರು ಮೂಡುಬಿದಿರೆ ಪೊಲೀಸರಿಗೆ ನಾಪತ್ತೆ ದೂರು ನೀಡಿದರೆಂದು ತಿಳಿದುಬಂದಿದೆ. ಸೋಮವಾರ ತಡರಾತ್ರಿ ಸಾರ್ವಜನಿಕರು ವ್ಯಾಪಕವಾಗಿ ಸಂಧ್ಯಾ ಅವರ ಹುಡುಕಾಟದಲ್ಲಿ ತೊಡಗಿದ್ದಾಗ ಮನೆಯಿಂದ ಸ್ವಲ್ಪ ದೂರದಲ್ಲಿರುವ ಗಿರಿಜಾ ಎಂಬವರಿಗೆ ಸೇರಿದ ಸಣ್ಣ ಬಾವಿಯಲ್ಲಿ ರಾತ್ರಿ 2-30ಕ್ಕೆ ಶವ ಪತ್ತೆಯಾಗಿದೆ.

ಸಂಧ್ಯಾ ಜೈನ್ ಅವರಿಗೆ ಕಳೆದ ವರ್ಷದ ನವೆಂಬರ್ 27ರಂದು ವಿವಾಹವಾಗಿದ್ದು, ಅದರ ನಂತರ ಡಿಸೆಂಬರ್ 18ರಂದು ಆಕೆಯ ಸಹೋದರಿ ಶಿಲ್ಪಾರನ್ನು ಮೈಸೂರಿಗೆ ವಿವಾಹ ಮಾಡಿಕೊಡಲಾಗಿದೆ. ಭಾನುವಾರ ಸಂಧ್ಯಾರ ಪತಿ ಮನೆ ಅಳಿಯೂರಿನಲ್ಲಿ ಸಹೋದರಿ ಹಾಗೂ ಅವರ ಪತಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ಮುಗಿಸಿ ಅವರು ಮೈಸೂರಿಗೆ ವಾಪಾಸಾಗುವ ಸಿದ್ಧತೆಯಲ್ಲಿದ್ದರು. ಅವರನ್ನು ಬಸ್ಸಿಗೆ ಬಿಟ್ಟು ಬರೋಣ ಎಂದು ಪತಿ ಸಂಧ್ಯಾಳಿಗೆ ಹೇಳಿದ್ದು ಸಂಧ್ಯಾ ಬಟ್ಟೆ ಬದಲಾಯಿಸಿ ಬರುತ್ತೇನೆಂದು ರೂಮಿನೊಳಗೆ ಹೋಗಿದ್ದಾಕೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ. ಪತಿ ಹಾಗೂ ಮನೆಯವರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ನಂತರ ರಾತ್ರಿ 2-30 ಗಂಟೆಗೆ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಸಾಗರ ಮೂಲದ ಸಂಧ್ಯಾ ಜೈನ್ ವಿವಾಹಕ್ಕೂ ಮೊದಲು ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದರು. ಸೌಂದರ್ಯ ಪ್ರಜ್ಞೆಯಿದ್ದ ಈಕೆ ಇತ್ತೀಚಿಗೆ ತನ್ನ ತಲೆಕೂದಲು ಉದುರುತ್ತಿದ್ದ ಬಗ್ಗೆ ಹಾಗೂ ಕಣ್ಣಿನ ಸುತ್ತ ಕಪ್ಪು ವರ್ತುಲ ಉಂಟಾಗಿರುವ ಬಗ್ಗೆ ಮಾನಸಿಕವಾಗಿ ನೊಂದುಕೊಂಡಿದ್ದರು ಎಂದು ಕೂಡ ಹೇಳಲಾಗುತ್ತಿತ್ತು.

ದಾಂಪತ್ಯ ಸಮಸ್ಯೆ

ದಾಂಪತ್ಯ ಜೀವನ ನಡೆಸಲು ಸಮಸ್ಯೆಯಾಗುತ್ತಿದ್ದುದರಿಂದ ನೊಂದು ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಹೋದರ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಂಧ್ಯಾ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡೆತ್ ನೋಟ್ ಬರೆದಿಟ್ಟಿದ್ದರು ಎಂದು ಹೇಳಲಾದರೂ ಶವದ ಮಹಜರು ನಡೆಸಿದ ತಹಸೀಲ್ದಾರ್ ಮುಹಮ್ಮದ್ ಇಸಾಕ್ ಹಾಗೂ ಮೂಡುಬಿದಿರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.