ಮೊಬೈಲಿನಲ್ಲೇ ಲಭ್ಯವಾಗಲಿದೆ ಅಂಕಪಟ್ಟಿ , ಪ್ರಮಾಣಪತ್ರ

ಇತಿಹಾಸದಲ್ಲೇ ನಗರ

ವಾರ್ಸಿಟಿ ಮೊದಲ ಹೆಜ್ಜೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇದುವರೆಗೂ ತಮಗೆ ಅಂಕಪಟ್ಟಿ ಸಿಕ್ಕಿಲ್ಲ, ಸಮಸ್ಯೆಗೆ ಒಳಗಾಗಿದ್ದೇವೆ. ಪ್ರಮಾಣ ಪತ್ರ ಇಲ್ಲದೇ ಏನೂ ಮಾಡಲು ಆಗುತ್ತಿಲ್ಲಾ ಎಂದು ಕೊರಗುತ್ತಿದ್ದ ವಿದ್ಯಾರ್ಥಿಗಳು ಚಿಂತಿಸಬೇಕಾಗಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯ ಇದೀಗ ಮಹತ್ತರವಾದ ಹೆಜ್ಜೆಯೊಂದನ್ನು ಇಟ್ಟಿದ್ದು, ಇನ್ಮೇಲೆ ಮೊಬೈಲಿನಲ್ಲೇ ಲಭ್ಯವಾಗಲಿದೆ ಅಂಕಪಟ್ಟಿ, ಪ್ರಮಾಣಪತ್ರ !

ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕೆಲಸ ಕಾರ್ಯಗಳು ಇದೀಗ ಡಿಜಿಟಲೈಜೇಶನ್ ಆಗುತ್ತಿದೆ. ಮಂಗಳೂರು ವಿ ವಿ ಕಳೆದ ಹಲವು ವರ್ಷಗಳಿಂದ ಡಿಜಿಟಲ್ ಫಾರ್ಮೆಟಿಗೆ ಬದಲಾಯಿಸುವ ಕೆಲಸ ಸಾಗಿದೆ. ವಿ ವಿ.ಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ಹಾಗೂ ಪ್ರಮಾಣ ಪತ್ರ ಮೊಬೈಲ್ ಆ್ಯಪ್ ಮೂಲಕವೇ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಅಂದ ಹಾಗೆ ಮಂಗಳೂರು ವಿ ವಿ.ಯ ಈ ವಿಶೇಷ ಪ್ರಯತ್ನ ರಾಜ್ಯದ ವಿ ವಿ.ಗಳ ಇತಿಹಾಸದಲ್ಲೇ ಮೊದಲು.

ರಾಜ್ಯದ ಎಲ್ಲಾ ವಿ ವಿ.ಗಳಿಗೆ ಅಂಕಪಟ್ಟಿ ಪ್ರಮಾಣ ಪತ್ರಗಳೂ ಡಿಜಿಟಲ್ ವರ್ಶನ್ನಿಗೆ ಬದಲಾಯಿಸಿಕೊಳ್ಳಬೇಕು ಎಂದು ಆರು ತಿಂಗಳ ಹಿಂದೆಯಷ್ಟೇ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿತ್ತು. ಕೆಲವು ವಿ ವಿ.ಗಳು ಯೋಜನೆ ಜಾರಿಗೆ ಪ್ರಯತ್ನ ಪಟ್ಟರೆ ಇನ್ನೂ ಕೆಲವು ವಿ ವಿ.ಗಳು ಈ ಯೋಜನೆಯನ್ನು ಜಾರಿಗೆ ತಂದಾಗಿದೆ. ಅದರಲ್ಲೂ ಮಂಗಳೂರು ವಿ ವಿ ಮೊದಲ ಸ್ಥಾನದಲ್ಲಿದೆ.

2012ರ ನಂತರ ಮಂಗಳೂರು ವಿ ವಿ.ಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಅಂಕ ಪಟ್ಟಿ ಹಾಗೂ ಪ್ರಮಾಣ ಪತ್ರಗಳ ಹಿಂಭಾಗದಲ್ಲಿ ಕ್ಯೂ ಆರ್ ಕೋಡುಗಳನ್ನು ಹಾಕಲಾಗಿದೆ. ಮಂಗಳೂರು ವಿ ವಿ ವೆಬ್ ಸೈಟಿನಿಂದ ಇದಕ್ಕೆ ಸಂಬಂಧಿಸಿದ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿದ ಕೂಡಲೇ ಅಂಕಪಟ್ಟಿ ಹಾಗೂ ಪ್ರಮಾಣಪತ್ರದ ಕ್ಯೂ ಆರ್ ಕೋಡ್ ಮೇಲೆ ಇಟ್ಟು ಸ್ಕ್ಯಾನ್ ಮಾಡಿದಾಕ್ಷಣ ಅಂಕಪಟ್ಟಿ, ಪ್ರಮಾಣ ಪತ್ರ ಕಾಣಸಿಗಲಿದೆ.

ಇದಕ್ಕಾಗಿ ಎನ್ ಎಫ್ ಸಿ ಚಿಪ್ಪಿನಲ್ಲಿ ಈ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಲೋಡ್ ಮಾಡಿಕೊಂಡು ಇಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯಾವಾಗ ಬೇಕೋ ಆವಾಗ ತಮ್ಮ ಅಂಕ ಪಟ್ಟಿ, ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ತಂತ್ರಜ್ಞಾನದ ಮೂಲಕ 2012ರ ಬಳಿಕದ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳು ಮಾತ್ರ ಲಭ್ಯವಾಗಲಿದೆ. ಈ ಹಿಂದಿನ ವರ್ಷದ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನೂ ನೀಡುವ ಬಗ್ಗೆಯೂ ಯೋಜನೆ ರೂಪಿಸಲಾಗುವುದು ಎಂದಿದ್ದಾರೆ ಮಂಗಳೂರು ವಿ ವಿ ಪರೀಕ್ಷಾಂಗ ರಿಜಿಸ್ಟ್ರಾರ್ ಡಾ ಎ ಎಂ ಖಾನ್.