`ಜನನುಡಿ’ ಉದ್ಘಾಟನೆಗೆ ಮರಾಠಿ ಸಾಹಿತಿ ಲಿಂಬಾಳೆ

ಮಂಗಳೂರು : ನಗರದಲ್ಲಿ ಡಿಸೆಂಬರ್ 24, 25ರಂದು ನಡೆಯಲಿರುವ ಜನನುಡಿಯನ್ನು `ಅಕ್ರಮ ಸಂತಾನ’ ಆತ್ಮಕತೆ ಮೂಲಕ ಸಾಮಾಜಿಕ ಸಂಚಲನ ಮೂಡಿಸಿದ್ದ ಪ್ರಖ್ಯಾತ ಮರಾಠಿ ಸಾಹಿತಿ ಶರಣಕುಮಾರ್ ಲಿಂಬಾಳೆ ಉದ್ಘಾಟಿಸಲಿದ್ದಾರೆ.

ಜನನುಡಿಗೆ ವ್ಯಾಪಕ ತಯಾರಿಗಳು ನಡೆಯುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾಹಿತಿಗಳು, ಚಳುವಳಿಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯವನ್ನು ವ್ಯಾಪಾರವನ್ನಾಗಿಸುತ್ತಿರುವ  ವೈಭವದ ಸಾಹಿತ್ಯ  ಜಾತ್ರೆಗಳನ್ನು  ವಿರೋಧಿಸಿ, ಅದಕ್ಕೆ ಪರ್ಯಾಯವಾಗಿ 2013ರಲ್ಲಿ ಆರಂಭಗೊಂಡ `ಜನನುಡಿ’ ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಅಂಬೇಡ್ಕರ್ 125ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ, ಅಂಬೇಡ್ಕರರ ಸಮಾನತೆಯ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ `ಸಮತೆ ಎಂಬುದು ಅರಿವು’ ಘೋಷಣೆಯೊಡನೆ ಜನನುಡಿ ಗೋಷ್ಠಿಗಳು ನಡೆಯಲಿವೆ.

“ಕೋಮುವಾದಿಗಳು, ಶಿಕ್ಷಣ ವ್ಯಾಪಾರಿಗಳು, ಧರ್ಮಾಧಿಕಾರಿಗಳು, ಮಠಾಧೀಶರು ಸಾಹಿತ್ಯ ಜಾತ್ರೆಯನ್ನು, ಸರ್ವ ಧರ್ಮ ಸಮ್ಮೇಳನಗಳನ್ನು ನಡೆಸಿ, ತಾವು ನಡೆಸುವ ಚಟುವಟಿಕೆಗಳಿಗೆ ನೈತಿಕತೆಯನ್ನು ತಂದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೋಮುವಾದ, ಧಾರ್ಮಿಕ ಮೂಲಭೂತವಾದ, ಜಾತಿವಾದ, ಬಂಡವಾಳವಾದಗಳ ಅಪವಿತ್ರ ಮೈತ್ರಿಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಇಂತಹ ಅಪವಿತ್ರ ಮೈತ್ರಿಯಲ್ಲಿ ನಡೆಯುವ ಸಾಹಿತ್ಯ ಜಾತ್ರೆಗಳಿಗೆ ಸಾಹಿತಿಗಳನ್ನು ಗಾಜಿನ ಗೋಳದಲ್ಲಿ ತುಂಬಿಸಿಟ್ಟು ಪೇಪರ್ ವೈಟುಗಳನ್ನಾಗಿ ಬಳಸಲಾಗುತ್ತಿದೆ. ಈ ಮೂಲಕ ಜನವಿರೋಧಿ ಜಾಲವು ಸಾಹಿತ್ಯ-ಸಂಸ್ಕೃತಿಗಳನ್ನು ಬಳಸಿಕೊಂಡು ಜನಮನ್ನಣೆ ಪಡೆಯುತ್ತಿದೆ” ಎಂದು ಸಂಘಟಕರು ಹೇಳದ್ದಾರೆ.

ಈ ಹಿನ್ನಲೆಯಲ್ಲಿ ಅಭಿಮತ ಮಂಗಳೂರು ಬಳಗವು ಪ್ರಗತಿಪರ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು ಮತ್ತು ಜನಪರ ಸಂಘಟನೆಗಳೊಡನೆ ಸೇರಿಕೊಂಡು ಮಂಗಳೂರಿನಲ್ಲಿ 3 ವರ್ಷಗಳಿಂದ ಜನನುಡಿಯನ್ನು ನಡೆಸುತ್ತ ಬರಲಾಗಿದೆ.

ನಂತೂರು ಶಾಂತಿಕಿರಣದಲ್ಲಿ ಆರಂಭಗೊಳ್ಳುವ ಅಧ್ಯಕ್ಷತೆಯನ್ನು ಕೆ ವಿ ನಾರಾಯಣ ವಹಿಸಲಿದ್ದಾರೆ.

ಸಮಾನತೆಯ ಆಶಯ ಮತ್ತು ಮೀಸಲಾತಿ, ತುಳುನಾಡಿನ ಸಾಂಸ್ಕೃತಿಕ – ನೆಲಮೂಲ ಪರಂಪರೆಗಳು, ಕವಿ ಗೋಷ್ಠಿ, ಜಾತಿ ವಿನಾಶ  ಹಾಗೂ ಮುಸ್ಲಿಂ – ದಲಿತ – ಹಿಂದುಳಿದ ವರ್ಗಗಳ ಐಕ್ಯತೆ : ಸವಾಲು ಸಾಧ್ಯತೆ ಮುಂತಾಗಿ ಗೋಷ್ಠಿಗಳು ನಡೆಯಲಿವೆ. ದಿನಾಂಕ 24ರ ಸಂಜೆ ಕುರಲ್ ಕಲಾತಂಡ ಕುಡ್ಲ, ಫೇಸ್ ಟ್ರಸ್ಟ್ ತಂಡ ಮಂಗಳೂರು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಡಾ ವಿಜಯ, ಡಾ ನಾಗಪ್ಪ ಗೌಡ, ಎರಿಕ್ ಒಝಾರಿಯೊ, ಅಬ್ದುಸ್ಸಲಾಂ ಪುತ್ತಿಗೆ, ಡಾ. ಮೀನಾಕ್ಷಿ ಬಾಳಿ, ಡಾ ಸಿ ಜಿ ಲಕ್ಷ್ಮಿಪತಿ, ರಹಮತ್ ತರೀಕೆರೆ, ಡಾ ಬಂಜಗೆರೆ ಜಯಪ್ರಕಾಶ್, ಡಾ ಅರವಿಂದ ಮಾಲಗತ್ತಿ, ದಿನೇಶ್ ಅಮೀನ್ ಮಟ್ಟು, ,  ಎಚ್ ಎಸ್ ಅನುಪಮಾ, ರಾಜಪ್ಪ ದಳವಾಯಿ, ಹುಲಿಕುಂಟೆ ಮೂರ್ತಿ, ಪ್ರದೀಪ್ ರಮಾವತ್, ಕಿರಣ್ ಗಾಜನೂರು, ಅಪ್ಪಗರೆ ಸೋಮಶೇಖರ್, ಪುರುಷೋತ್ತಮ ಬಿಳಿಮಲೆ, ಮೂಡ್ನಾಕಾಡು ಚಿನ್ನಸ್ವಾಮಿ, ಶಿವಾಜಿ ಗಣೇಶನ್,  ಸಬಿತಾ ಬನ್ನಾಡಿ, ಮಲ್ಲಿಕಾ ಬಸವರಾಜು, ಶೈಲಜಾ ನಾಗರಘಟ್ಟ, ವಿ ಕೆ ಸಂಜ್ಯೋತಿ, ಭಾರತೀ ದೇವಿ ಮತ್ತು 20ಕ್ಕೂ ಹೆಚ್ಚು ಕವಿಗಳು ಎರಡು ದಿನಗಳ ಕಾಲವೂ ಜನನುಡಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.